CRIME NEWS
13 ಕಡೆ ಹೂತ ಜಾಗ ತೋರಿಸಿದ ಅಜ್ಞಾತ ವ್ಯಕ್ತಿ! ಜಾಗದಲ್ಲಿ ತಲೆ ಬುರುಡೆ ಇದೆಯೋ ಎಂಬ ಬಗ್ಗೆ ಶೋಧ ನಾಳೆಯಿಂದ
: ಧರ್ಮಸ್ಥಳದ ನೇತ್ರಾವತಿ ನದಿ ದಡದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರ ಸ್ಥಳ ಮಹಜರು ಆರಂಭಿಸಿದೆ.
ಪ್ರಕರಣದ ಪ್ರಮುಖ ಕೊಂಡಿಯಾಗಿರುವ ಅಜ್ಞಾತ ವ್ಯಕ್ತಿಯನ್ನು ಸ್ಥಳಕ್ಕೆ ಕರೆತಂದ ತಂಡ, ಆತ ಬೊಟ್ಟು ಮಾಡಿ ತೋರಿಸಿದ ಜಾಗದಲ್ಲಿ ಪರಿಶೀಲನೆ ನಡೆಸಿದ್ದು, ಸೋಮವಾರ ಸಂಜೆವರೆಗೆ 13 ಕಡೆ ಮೃತ ದೇಹ ಕೂತಿಟ್ಟಿರುವ ಜಾಗವನ್ನ ತೋರಿಸಲಾಗಿದ್ದು ಮಹಜರು ನಡೆಸಿ ಟೇಪ್ ಹಾಕಲಾಗಿದೆ.
ಮುಖಕ್ಕೆ ಮಾಸ್ಕ್ ಧರಿಸಿದ್ದ ಅನಾಮಿಕ ವ್ಯಕ್ತಿಯನ್ನು ಬಿಗಿ ಭದ್ರತೆಯಲ್ಲಿ ನೇತ್ರಾವತಿ ದಡಕ್ಕೆ ಕರೆತರಲಾಯಿತು. ತಾನು ಈ ಹಿಂದೆಯೇ ತಲೆಬುರುಡೆಯೊಂದನ್ನು ಇಲ್ಲಿಂದ ಹೊರತೆಗೆದಿದ್ದಾಗಿ ಆತ ಹೇಳಿಕೆ ನೀಡಿದ್ದಾನೆ.
ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು, ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್), ಕಂದಾಯ, ಅರಣ್ಯ ಹಾಗೂ ಸರ್ವೇ ಇಲಾಖೆಯ ಅಧಿಕಾರಿಗಳ ಸಮ್ಮುಖoದಲ್ಲಿ ಮಹಜರು ಪ್ರಕ್ರಿಯೆ ಕೈಗೊಂಡರು.
ಧರ್ಮಸ್ಥಳದ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ತಾನೇ ಹಲವು ಶವಗಳನ್ನು ಹೂತಿರುವುದಾಗಿ ಅನಾಮಿಕ ವ್ಯಕ್ತಿ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆತನ ಹೇಳಿಕೆಯನ್ನು ಆಧರಿಸಿ, ತನಿಖಾ ತಂಡವು ಇಂದು ನೇತ್ರಾವತಿ ತೀರದಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ, ಆತ ನಿರ್ದಿಷ್ಟ ಸ್ಥಳವೊಂದನ್ನು ಗುರುತಿಸಿದ್ದು, ಆ ಪ್ರದೇಶದಲ್ಲಿ ಶವ ಹೂತಿರುವುದಾಗಿ ಮಾಹಿತಿ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಸ್ಥಳದಲ್ಲಿ ದಟ್ಟವಾಗಿ ಗಿಡಗಂಟಿಗಳು ಬೆಳೆದಿದ್ದು, ಅವುಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಅನಾಮಿಕ ಗುರುತಿಸಿದ ಪ್ರದೇಶದ ಸುತ್ತ ಪೊಲೀಸರು ಟೇಪ್ ಕಟ್ಟಿ ನಿರ್ಬಂಧ ಹೇರಿದ್ದು, ಯಾರೂ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ತಜ್ಞರ ತಂಡ ಸ್ಥಳದಲ್ಲಿ ಬೀಡುಬಿಟ್ಟಿದ್ದು, ತನಿಖೆ ಮುಂದುವರಿದಿದೆ.
ಎಸ್‌ಐಟಿ ತಂಡದ ಅಧಿಕಾರಿಗಳಾದ ಡಿಐಜಿ ಎಂಎನ್ ಅನುಚೇತ್ ಮತ್ತು ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರ ಮುಂದೆ ದೂರುದಾರರು ಶನಿವಾರ ಮತ್ತು ಭಾನುವಾರ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದರು. ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಕೂಡ ಭಾನುವಾರ ವಿಚಾರಣೆಯಲ್ಲಿ ಭಾಗವಹಿಸಿದ್ದರು.
ಧರ್ಮಸ್ಥಳ ಗ್ರಾಮ ವ್ಯಾಪ್ತಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊಲೆಯಾದ ವ್ಯಕ್ತಿಗಳ ಶವಗಳನ್ನು ಹೂಳಲು ಒತ್ತಾಯಿಸಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಮಾಜಿ ಪೌರ ಕಾರ್ಮಿಕ ಎಂದು ಹೇಳಲಾದ ಅಜ್ಞಾತ ದೂರುದಾರರು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರ ದೂರಿನ ಮೇರೆಗೆ ಜುಲೈ 4 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದೂರುದಾರರು ಅದಾದ ಒಂದು ವಾರದ ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ತಾವೇ ಹೊರತೆಗೆದಿದ್ದು ಎಂದು ಹೇಳಿಕೊಂಡ ಅಸ್ಥಿಪಂಜರದ ಅವಶೇಷಗಳನ್ನು ಹಾಜರುಪಡಿಸಿದ್ದಾರೆ. ವಕೀಲರು ಮತ್ತು ಪಂಚ ಸಾಕ್ಷಿಗಳ ಮುಂದೆ ಪೊಲೀಸರು ಅವುಗಳನ್ನು ವಶಪಡಿಸಿಕೊಂಡರು. ಜುಲೈ 19 ರಂದು ಎಸ್‌ಐಟಿ ರಚನೆಯಾಯಿತು ಮತ್ತು ಜುಲೈ 25 ರಂದು ಸ್ಥಳೀಯ ಪೊಲೀಸರಿಂದ ಪ್ರಕರಣದ ದಾಖಲೆಗಳನ್ನು ಅಧಿಕೃತವಾಗಿ ಪಡೆದುಕೊಂಡಿದ್ದರು.