CRIME NEWS
ಐವತ್ತು ಸಾವಿರದಿಂದ 5,000 ಕ್ಕೆ ಇಳಿದ ಲಂಚ ಬೇಡಿಕೆ! ಹಲವು ದಿನಗಳ ಕಾಲ ನಡೆದ ಇಂಟರೆಸ್ಟಿಂಗ್ ಲಂಚದ ಪ್ರಸಂಗ!
ಮಂಗಳೂರು: ಅಪಘಾತಗೊಂಡ ಕಾರು ಠಾಣೆಯಿಂದ ಬಿಡಿಸಿಕೊಳ್ಳಲು 50,000 ಲಂಚಕ್ಕೆ ಬೇಡಿಕ ಇಟ್ಟು, ಕೆಲವು ದಿನಗಳ ಚೌಕಾಸಿ ನಡೆದು, 5000 ರೂಪಾಯಿಗೆ ಒಪ್ಪಿ ಅದನ್ನು ಸ್ವೀಕರಿಸುವಾಗ ಕದ್ರಿ ಠಾಣೆಯ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಾರು ಮಾಲೀಕರು ಮತ್ತು ಪೊಲೀಸ್ ನಡುವೆ ಹಲವು ದಿನಗಳ ಕಾಲ ನಡೆದ ಲಂಚದ ಚೌಕಾಸಿ ಇಂದು ಲೋಕಾಯುಕ್ತ ಹೆಣೆದ ಬಲೆಗೆ ಬೀಳುವುದರ ಮೂಲಕ ಅಂತ್ಯವಾಗಿದೆ.
ಲಂಚ ಪಡೆದೇ ಸಿದ್ದ ಎಂಬ ಹಪಾಹಪಿಯಲ್ಲಿದ್ದ ಪೊಲೀಸ್ ಇದಕ್ಕಾಗಿ ನಾನಾ ತಂತ್ರಗಳನ್ನ ರೂಪಿಸಿದರೂ ಕಾರು ಮಾಲೀಕರು ಲಂಚ ಕೊಡದೆ ಇರಲು ತುಂಬಾ ಪ್ರಯತ್ನ ಪಟ್ಟಿದ್ದಾರೆ. ಪ್ರಸಂಗದಲ್ಲಿ ಕಾರು ಪಡೆಯಲು ವಕೀಲರು ಕೂಡ ಠಾಣೆಗೆ ಬಂದು ಹೋಗಿದ್ದಾರೆ.
ಇಂಟರೆಸ್ಟಿಂಗ್ ಸ್ಟೋರಿ ಹೀಗಿದೆ ನೋಡಿ:
ಕಾರು ಮತ್ತು ಸ್ಕೂಟರ್ ಮದ್ಯೆ ನಂತೂರು ಸರ್ಕಲ್‌ನಲ್ಲಿ ಅಪಘಾತ ಆಗಿದ್ದು, ಈ ಕುರಿತು ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ತಸ್ಲಿಂ ಕಾರಿನ ದಾಖಲೆಗಳನ್ನು ಪೊಲೀಸ್ ಠಾಣೆಗೆ ತಂದು ಕೊಡುವಂತೆ ಕಾರು ಮಾಲೀಕರಿಗೆ ತಿಳಿಸಿದ್ದರು. ಅದರಂತೆ ಕಾರು ಮತ್ತು ಕಾರಿನ ದಾಖಲೆಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.
ಬಳಿಕ ಕಾರನ್ನು ಪೊಲೀಸ್ ಠಾಣೆಯಿಂದ ಬಿಡಿಸಿಕೊಡಲು ತಸ್ಲಿಂ 50,000 ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ದೂರುದಾರರು ತನ್ನ ವಕೀಲರಲ್ಲಿ ವಿಷಯವನ್ನು ತಿಳಿಸಿದರು. ಆಗ ವಕೀಲರು ಖುದ್ದು ಠಾಣೆಗೆ ಭೇಟಿ ನೀಡಿ ಕಾರನ್ನು ಬಿಟ್ಟುಕೊಡುವಂತೆ ಕೇಳಿಕೊಂಡರು.
ಈ ಬುದ್ದಿವಂತ ಪೊಲೀಸ್ ತಸ್ಲೀಮ್ ಕಾರು ಬಿಟ್ಟುಕೊಡುತ್ತೇನೆ ಕಾಗದ ಪತ್ರಗಳಿಗೆ ಸಹಿ ಹಾಕಿ ಎಂದು ತಿಳಿಸಿದರು. ಇದನ್ನು ನಂಬಿದ ಕಾರಿನ ಮಾಲೀಕರು ಸಹಿ ಹಾಕಿದರು.
ಕಾರನ್ನು ಸ್ವೀಕರಿಸಿದ್ದಾರೆ ಎಂದು ಸಹಿ ಪಡೆದುಕೊಂಡ ತಸ್ಲೀಮ್ ಖತರ್ನಾಕ್ ಐಡಿಯಾ ಮಾಡಿ ಕಾರನ್ನು ಪೊಲೀಸ್ ಠಾಣೆಯಿಂದ ಬಿಟ್ಟುಕೊಡಲೇ ಇಲ್ಲ.
ಬಳಿಕ ಹಲವು ಬಾರಿ ಮನವಿಯ ಬಳಿಕ ಕಾರನ್ನು ಬಿಟ್ಟುಕೊಡಲು ಒಪ್ಪಿ ದರೂ ಕಾರು ಮಾಲೀಕರ ಮೊಬೈಲನ್ನು ಬಲವಂತದಿಂದ ಪಡೆದುಕೊಂಡ ತಸ್ಲೀಮ್ ತನ್ನ ಬಳಿ ಇಟ್ಟುಕೊಂಡಿದ್ದರು.
ಮೊಬೈಲ್ ಪೋನ್ ವಾಪಸ್ ಕೊಡಿ ಎಂದು ಪರಿಪರಿಯಾಗಿ ಕೇಳಿಕೊಂಡಾಗ 50,000 ಕೊಟ್ಟರೆ ಮಾತ್ರ ವಾಪಸ್ ಕೊಡುವುದಾಗಿ ಹೇಳಿದರು.
ಜೊತೆಗೆ ಮೊಬೈಲ್ ಪೋನ್ ಹಿಂತಿರುಗಿಸಬೇಕಾದರೆ original ಲೈಸನ್ಸ್ ಠಾಣೆಗೆ ತಂದುಕೊಡುವಂತೆ ಸೂಚಿಸಿದ್ದರು. ಕಾರು ಮಾಲೀಕರು ಲೈಸನ್ಸ್ ಕೂಡ ಠಾಣೆಗೆ ತಂದು ನೀಡಿದ್ದರು.
ಠಾಣೆಯ ಮತ್ತೊಬ್ಬ ಹೆಡ್ ಕಾನ್ಸ್ಟೇಬಲ್ ವಿನೋದ್ ಮೂಲಕ ತಸ್ಲೀಮ್ ಮತ್ತೆ 30,000 ಲಂಚಕ್ಕೆ ಬೇಡಿಕೆ ಇಟ್ಟು ಲೈಸನ್ಸ್ ಪಡೆದುಕೊಂಡು ಹೋಗಲು ತಿಳಿಸಿದ್ದರು.
ಇದಾದ ಬಳಿಕ ಹಣದ ಬೇಡಿಕೆ ಪ್ರಮಾಣವು ಚೌಕಾಸಿ ರೂಪದಲ್ಲಿ ಇಳಿಯುತ್ತಾ ಬಂದಿತ್ತು.
ಜುಲೈ 9ರಂದು ಕದ್ರಿ ಟ್ರಾಪಿಕ್ ಪೊಲೀಸ್ ಠಾಣೆಗೆ ಹೋಗಿ ತಸ್ಲಿಂ ಬಳಿ ಮಾತನಾಡಿದಾಗ ಲೈಸೆನ್ಸ್ ಬೇಕಾದರೆ 10,000 ರು. ನೀಡುವಂತೆ ತಿಳಿಸಿದ್ದಾರೆ.
ಕಾರು ಮಾಲೀಕರು ತನ್ನ ಕಿಸೆಯಲ್ಲಿ 500 ರೂ. ಮಾತ್ರ ಇದೆ ಎಂದಾಗ 5000 ರೂ. ಇಲ್ಲದೇ ಠಾಣೆ ಕಡೆಗೆ ಬರಬೇಡ ಎಂದು ಬೈದು ಕಳುಹಿಸಿದ್ದರು.
ಕಾರ್ ಮಾಲೀಕರು ಈ ಕುರಿತು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದರು.
ಈ ಕುರಿತು ಪೊಲೀಸರಾದ ತಸ್ಲೀಮ್ ಮತ್ತು ವಿನೋದ್ ವಿರುದ್ಧ ಪ್ರಕರಣ ದಾಖಲಾಗಿದೆ.
ಜುಲೈ 10 ರಂದು ಪೊಲೀಸ್ ತಸ್ಲೀಮ್ 5000 ರೂಪಾಯಿ ಲಂಚ ಸ್ಪೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಲೋಕಾಯುಕ್ತ ಅಧೀಕ್ಷಕ ಕುಮಾರಚಂದ್ರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಡಿ ವೈ ಎಸ್ ಪಿ. ಗಾನ ಪಿ ಕುಮಾರ್, ಸುರೇಶ್ ಕುಮಾರ್.ಪಿ, ಪೊಲೀಸ್ ಇನ್ಸ್ಪೆಕ್ಟರ್ ಭಾರತಿ ಜಿ, ಶ್ರೀ ಚಂದ್ರಶೇಖರ್ ಕೆ.ಎನ್. ಕಾರ್ಯಾಚರಣೆ ನಡೆಸಿದ್ದರು.