DAKSHINA KANNADA
ಮರಳು ಮಾಫಿಯಾಕ್ಕೆ ಕಡಿವಾಣ: ಎಸ್ಪಿ, ಕಮಿಷನರ್ ಭರವಸೆ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ಮಾಫಿಯಾ ಹಾಗೂ ಡಿಜೆ ಹಾವಳಿಗೆ ಸಂಪೂರ್ಣ ಕಡಿವಾಣ ಹಾಕಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮತ್ತು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.
ನಗರ ಪೊಲೀಸ್ ಕಮಿಷನರ್ ಕಚೇರಿ ಸಭಾಂಗಣದಲ್ಲಿ ರವಿವಾರ ನಡೆದ ಮಾಸಿಕ ಎಸ್ಸಿ-ಎಸ್ಟಿ ಸಭೆಯಲ್ಲಿ ದಲಿತ ಸಮುದಾಯದ ಮುಖಂಡರ ಅಹವಾಲುಗಳಿಗೆ ಅವರು ಪ್ರತಿಕ್ರಿಯಿಸಿದರು.
ಜಿಲ್ಲೆಯಲ್ಲಿ ಕೆಂಪುಕಲ್ಲು ಮತ್ತು ಮರಳಿನ ಕೊರತೆಯಿಂದ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬರು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ ಡಾ. ಅರುಣ್ ಕೆ. ಜಿಲ್ಲೆಯಲ್ಲಿ ಅಗತ್ಯಕ್ಕಿಂತ ಎರಡು ಪಟ್ಟು ಹೆಚ್ಚು ನಾನ್ ಸಿಆರ್‌ಝಡ್‌ನ ಮರಳು ಲಭ್ಯವಿದೆ.
ಅದನ್ನು ಜಿಲ್ಲಾಡಳಿತದ ಆ್ಯಪ್‌ನಲ್ಲಿ ಬುಕ್ಕಿಂಗ್ ಮಾಡಬಹುದು. ಆದರೆ ಕೆಲವು ಮರಳು ಮಾಫಿಯಾದವರು ಸಿಆರ್‌ಝಡ್ ಮರಳೇ ಬೇಕೆನ್ನುತ್ತಿದ್ದಾರೆ. ಬೆಂಗಳೂರಿನಲ್ಲಿ ಎಂ- ಸ್ಯಾಂಡ್, ಹೋಲೋಬ್ಲಾಕ್‌ನಲ್ಲಿ ನಿರ್ಮಿಸಿದ ಕಟ್ಟಡಗಳು ಸುರಕ್ಷಿತವಾಗಿವೆ. ಇಲ್ಲಿ ಸಿಆರ್‌ಝಡ್ ಮರಳೇ ಬೇಕು ಎಂದು ಹೇಳುತ್ತಿರುವುದರ ಹಿಂದೆ ಮರಳು ಮಾಫಿಯಾ ಇದೆ. ಇದು ಕಪ್ಪು ಹಣದಲ್ಲಿ ನಡೆಯುತ್ತಿದೆ. ಆದರೆ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ನಗರದಲ್ಲಿ ಗಣೇಶೋತ್ಸವ, ಜನ್ಮಾಷ್ಟಮಿ ಮೊದಲಾದ ಉತ್ಸವಗಳನ್ನು ರಾತ್ರಿ 10:30ರೊಳಗೆ ಮುಗಿಸು ವಂತೆ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿರುವುದು ಶ್ಲಾಘನೀಯ. ಅದರೊಂದಿಗೆ ಡಿಜೆ ಹಾವಳಿಗೆ ಕೂಡ ಕಡಿವಾಣ ಹಾಕಬೇಕು ಎಂದು ಗಿರೀಶ್ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ 10:30ರ ನಂತರ ಯಾವ ಆಚರಣೆಗೂ ಅವಕಾಶವಿಲ್ಲ. ಅದರಲ್ಲಿ ಡಿಜೆ ಕೂಡ ಸೇರಿದೆ. ಆದೇಶ ಉಲ್ಲಂಘನೆಯಾದುದು ಕಂಡು ಬಂದರೆ ಪೊಲೀಸ್ ಕಂಟ್ರೋಲ್ ರೂಂ ಅಥವಾ 112ಗೆ ಮಾಹಿತಿ ನೀಡಬಹುದು. ಉಲ್ಲಂಘನೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಗರದ ಹಲವೆಡೆ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಗದೀಶ್ ಪಾಂಡೇಶ್ವರ, ಗಿರೀಶ್ ಕುಮಾರ್ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ ಹೆಲ್ಮೆಟ್ ಧರಿಸದವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗುತ್ತಿದೆ. ಸದ್ಯ ಮಳೆಗಾಲ ಇರುವುದರಿಂದ ವಾಹನಗಳನ್ನು ತಡೆದು ನಿಲ್ಲಿಸುವಾಗ ಅಪಘಾತಗಳು ಸಂಭವಿಸಬಹುದು ಎಂಬ ಕಾರಣಕ್ಕೆ ವಾಹನಗಳನ್ನು ತಡೆದು ನಿಲ್ಲಿಸುವ ಕಾರ್ಯಾಚರಣೆ ಕಡಿಮೆಗೊಳಿಸಲಾಗಿದೆ ಎಂದರು. ಈ ಸಂದರ್ಭ ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಮಿಥುನ್ ಎಚ್.ಎನ್. ಮಂಡ್ಯದಲ್ಲಿ ಇತ್ತೀಚೆಗೆ ವಾಹನ ತಡೆದು ನಿಲ್ಲಿಸಿದಾಗ ಅಪಘಾತ ಉಂಟಾದ ಅನಂತರ ವಾಹನ ತಡೆದು ದಂಡ ವಿಧಿಸುವ ಕಾರ್ಯಾಚರಣೆ ಕಡಿಮೆ ಮಾಡಲಾಗಿದೆ. ಕ್ಯಾಮರಾ ಸಹಿತ ತಂತ್ರಜ್ಞಾನಗಳನ್ನು ಆಧರಿಸಿ ಉಲ್ಲಂಘನೆಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.
ದಲಿತ ಸಂಘಟನೆಯ ನಾಯಕ ಎಸ್‌ಪಿ ಆನಂದ ಮಾತನಾಡಿ, ನಗರದಿಂದ ಯಾದವ್ ಎಂಬವರನ್ನು ಭಿಕ್ಷಾಟನೆಯ ಆರೋಪ ಹೊರಿಸಿ ಬಲವಂತವಾಗಿ ಪಚ್ಚನಾಡಿಯಲ್ಲಿರುವ ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ಸೇರ್ಪಡೆಗೊಳಿಸಿ ಶೋಷಣೆ, ಕಿರುಕುಳ ನೀಡಲಾಗಿದೆ. ಅವರು ಭಿಕ್ಷಾಟನೆ ನಡೆಸಿಲ್ಲ. ಬಿಟ್ಟುಬಿಡಿ ಎಂದರೂ ಒಂದು ವರ್ಷದ ಅನಂತರ ಬಿಟ್ಟಿದ್ದಾರೆ ಎಂದು ದೂರಿದರು.
ಈ ಸಂದರ್ಭ ಯಾದವ್ ಕೂಡ ಮಾತನಾಡಿ ಒಂದು ವರ್ಷದವರೆಗೆ ಪುನರ್ವಸತಿ ಕೇಂದ್ರದಲ್ಲಿ ಕೆಲಸ ಮಾಡಿಸಿ ದೌರ್ಜನ್ಯ ಎಸಗಿದ್ದಾರೆ. ವರ್ಷದ ಬಳಿಕ 10 ರೂ. ಕೊಟ್ಟು ಜೀವಬೆದರಿಕೆ ಹಾಕಿ ಕಳುಹಿಸಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಅಡಿಗ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕುಡುಬಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವುದಕ್ಕೆ ಪರಿಶಿಷ್ಟ ಜಾತಿಯವರ ವಿರೋಧವಿದೆ. ಅವರನ್ನು ಸೇರ್ಪಡೆ ಮಾಡಿದರೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಪಟ್ಟಿಯಲ್ಲಿರುವ ಜಾತಿಯವರಿಗೆ ಅನ್ಯಾಯವಾಗಲಿದೆ ಎಂದು ಎಸ್‌ಪಿ ಆನಂದ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದರು.
ಉರ್ವಸ್ಟೋರ್ ಸುಂಕದಕಟ್ಟೆ ಸಹಿತ ದಲಿತರ ಹಲವಾರು ಕಾಲನಿಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆಯಿಂದ ಅಳವಡಿಸಿರುವ ಸಿಸಿ ಕ್ಯಾಮರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮತ್ತು ಅವುಗಳಲ್ಲಿ ದಾಖಲಾಗುವ ಮಾಹಿತಿಗಳು ಎಲ್ಲಿ ಸಂಗ್ರಹಿಸಲ್ಪಡುತ್ತವೆ ಎಂಬುದನ್ನು ಪರಿಶೀಲಿಸಬೇಕು ಎಂದು ಪ್ರಮೋದ್ ಕುಮಾರ್ ಮನವಿ ಮಾಡಿದರು.
ಜಾತಿನಿಂದನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ಎಂ.ದೇವದಾಸ್ ಮನವಿ ಮಾಡಿದರು.
ಬೆಳ್ತಂಗಡಿ ತಾಲೂಕಿನ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಹಾಗೂ ರಾಜ್ಯ ಸಮಿತಿ ಸದಸ್ಯ ಶೇಖರ್ ಲಾಯಿಲ ಮಾತನಾಡಿ ಬೆಳ್ತಂಗಡಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ವಾಸಿಸುತ್ತಿರುವ ಆದಿವಾಸಿ ಕುಟುಂಬಗಳಿಗೆ ರಸ್ತೆ ಸಂಪರ್ಕ ಮತ್ತು ವಿದ್ಯುತ್ ಸಹಿತ ಮೂಲಭೂತ ಸೌಕರ್ಯಗಳ ಕೊರತೆಯಿದೆ. ರಾಷ್ಟ್ರೀಯ ಉದ್ಯಾನವನದ 9 ಗ್ರಾಮಗಳಲ್ಲಿ ವಾಸಿಸುತ್ತಿರುವ ಮಲೆಕುಡಿಯ ಸಮುದಾಯದ 210ಕ್ಕೂ ಹೆಚ್ಚು ಸದಸ್ಯರು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ತುರ್ತಾಗಿ ರಸ್ತೆ ಸಂಪರ್ಕ ಮತ್ತು ಕಾಲುಸೇತುವೆಯ ಅಗತ್ಯವಿದೆ ಎಂದರು.
ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ 18 ’ಡಿ’ ಗ್ರೂಪ್ ನೌಕರರಿಗೆ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ಮಾತ್ರ ವೇತನ ಸಿಗುತ್ತಿದೆ. ತಿಂಗಳಿಗೆ ಒಂದು ದಿನವೂ ರಜೆ ಸಿಗುತ್ತಿಲ್ಲ ಎಂದು ಶೇಖರ್ ಲಾಯಿಲ ಹೇಳಿದರು.
ಬೆಳ್ತಂಗಡಿ ತಾಲೂಕಿನ ಸುಲ್ಕೇರಿಯ ಅಟ್ರಿಂಜೆಯಲ್ಲಿ ಕೊರಗ ಕುಟುಂಬಗಳು ನದಿ ದಾಟಲು ಮರದ ಸೇತುವೆಯನ್ನು ಅವಲಂಬಿಸಿವೆ. ಅಲ್ಲಿಗೆ ಸೇತುವೆ ಮಂಜೂರಾಗಿದ್ದರೂ ಅದನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ ಎಂದು ಶೇಖರ್ ಲಾಯಿಲ ದೂರಿದರು.
ದಲಿತ ಸಮುದಾಯದ ಚಂದ್ರಕುಮಾರ್, ಅಮಲ ಜ್ಯೋತಿ ಮತ್ತಿತರರು ವಿಷಯ ಪ್ರಸ್ತಾಪಿಸಿದರು. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ರವಿಶಂಕರ್, ಡಿಸಿಆರ್‌ಇ ಇನ್ಸ್‌ಪೆಕ್ಟರ್ ವಿದ್ಯಾಧರ್ ಉಪಸ್ಥಿತರಿದ್ದರು.