ಕುಡುಪು ಆಶ್ರಫ್ ಗುಂಪು ಹತ್ಯೆ ಪ್ರಕರಣ
ಮಂಗಳೂರು: ಕುಡುಪುವಿನಲ್ಲಿ ಗುಂಪಿನಿಂದ ಕೊಲೆಗೆ ಈಡು ಆಗಿದ್ದ ಕೇರಳದ ಮುಹಮ್ಮದ್ ಅಶ್ರಫ್ ಮರಣೋತ್ತರ ಪರೀಕ್ಷೆ ಬಹಿರಂಗಗೊಳಿಸಲಾಗಿದೆ.
ದೇಹ ಮತ್ತು ತಲೆಗೆ ಆದ ತೀವ್ರ ಗಾಯಗಳ ಪರಿಣಾಮವಾಗಿ, ಮೆದುಳಿನಲ್ಲಿನ ರಕ್ತಸ್ರಾವ ಮತ್ತು ಮೂತ್ರಪಿಂಡಕ್ಕೆ ಆಗಿದ್ದ ಗಾಯದಿಂದಾಗಿ ಅಶ್ರಫ್ ಸಾವನ್ನಪ್ಪಿರುವುದಾಗಿ ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿಗಳಲ್ಲಿ ಬಹಿರಂಗಗೊಂಡಿದೆ.
ಹಲ್ಲೆಯಿಂದ ಕಿಡ್ನಿಗೆ ತೀವ್ರ ಹಾನಿಯಾಗಿದ್ದೂ ಸಾವಿಗೆ ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮರಣೋತ್ತರ ಪರೀಕ್ಷೆಯನ್ನು ಏ. 28 ರಂದು ವೆನ್ಲಾಕ್ ಆಸ್ಪತ್ರೆಯಲ್ಲಿ ದೇರಳಕಟ್ಟೆಯ ಕ್ಷೇಮಾ ಆಸ್ಪತ್ರೆಯ ಡಾ. ಮಹಾಬಲೇಶ್ ಶೆಟ್ಟಿ ಸೇರಿದಂತೆ ವಿಧಿವಿಜ್ಞಾನ ತಜ್ಞರ ಸಮ್ಮುಖದಲ್ಲಿ ನಡೆಸಲಾಗಿತ್ತು.
ಅಶ್ರಫ್ ಬೆನ್ನಿನ ಮೇಲ್ಭಾಗ ಮತ್ತು ಕೆಳಭಾಗದಲ್ಲಿಯೂ ಮತ್ತೆ ಮತ್ತೆ ಹೊಡೆಯಲಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ತಲೆಯ ಬಲ ಭಾಗದ ಕಪಾಳಭಿತ್ತಿಯಲ್ಲಿ ಊತವಿದ್ದುದು ಕಂಡುಬಂದಿದೆ. ಬಲ ಕಿವಿ, ಹಣೆಯ ಸುತ್ತ, ಬಲಗಣ್ಣಿನ ಕೆಳಗೆ, ಮೂಗು, ಎಡ ಕೆನ್ನೆ ಮತ್ತು ಒಳ ತುಟಿಯ ಮೇಲೆಯೂ ಏಟು ಬಿದ್ದ ಗುರುತುಗಳು ಕಂಡಿವೆ.
ಬಲಗಣ್ಣಿನ ಕೆಳಗೆ ಒಂದು ಸೀಳು ಕೂಡ ಪತ್ತೆಯಾಗಿದೆ. ಎದೆಯ ಎರಡೂ ಭಾಗಗಳಲ್ಲಿ ಮಾತ್ರವಲ್ಲದೆ, ಎಡ ಭುಜದ ಪ್ರದೇಶದ ಮೇಲೆಯೂ ಬಲವಾದ ಹೊಡೆತದ ಗುರುತುಗಳು ಕಂಡಿವೆ.
ಬಲಗೈ, ಭುಜ, ಮುಂಗೈ ಮತ್ತು ಕೈಯ ಮೇಲೆ ದೊಡ್ಡ ಗಾಯಗಳು ಪತ್ತೆಯಾಗಿವೆ. ಮೊಣಕೈಯಲ್ಲಿ ಜಜ್ಜಿದಂತಾಗಿರುವುದೂ ಸೇರಿದಂತೆ ಎಡತೋಳು ಮತ್ತು ಕೈಯಲ್ಲಿಯೂ ಅಂಥದೇ ಗಾಯಗಳು ಕಂಡುಬಂದಿವೆ.
ತೊಡೆಗಳು ಮತ್ತು ಮೊಣಕಾಲುಗಳಲ್ಲೂ ಏಟಿನಿಂದಾಗಿ ಗಾಯಗಳು ಇವೆ. ತಲೆಬುರುಡೆಯಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಆಗಿದೆ.
ಎರಡೂ ಶ್ವಾಸಕೋಶಗಳು ಏಟಿನ ಪರಿಣಾಮವಾಗಿ ಜಜ್ಜಿ ಹೋಗಿದೆ. ಎರಡೂ ಕಿಡ್ನಿಗಳಿಗೆ ತೀವ್ರ ಹಾನಿಯಾಗಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಲಿವರ್ ಬಲ ಭಾಗದಲ್ಲಿ ಕೂಡ ಹೊಡೆತ ಬಿದ್ದಿದೆ. ತೀವ್ರ ಗಾಯದ ಪರಿಣಾಮವಾಗಿ ಮೂತ್ರಪಿಂಡ ವೈಫಲ್ಯ ವಾಗಿದೆ. ಹೊಟ್ಟೆಯಲ್ಲಿ ಜೀರ್ಣವಾಗದ ಆಹಾರ ಮತ್ತು ಹಸಿರು, ಕಪ್ಪು ಮಿಶ್ರಿತ ದ್ರವ ಪತ್ತೆಯಾಗಿದೆ.
ಹಲ್ಲೆಗೆ ಬಳಸಲಾದ ನಾಲ್ಕು ಮರದ ಕೋಲುಗಳನ್ನು ಕೂಡ ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಲಾಗಿತ್ತು. ಅಶ್ರಫ್ ದೇಹದ ಮೇಲೆ ಕಂಡುಬಂದ ಗಾಯಗಳ ಮಾದರಿ ಆ ಕೋಲುಗಳ ಗುಣಲಕ್ಷಣಗಳಿಗೆ ಹೊಂದಿಕೆಯಾಗುತ್ತದೆ ಎಂದು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ವಿಧಿವಿಜ್ಞಾನ ತಜ್ಞೆ ಡಾ. ರಶ್ಮಿ ಕೆಎಸ್ ಅವರು ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಅಶ್ರಫ್ ಅವರ ದೇಹದಲ್ಲಿ ಯಾವುದೇ ವಿಷಕಾರಿ ವಸ್ತುಗಳು, ಔಷಧಗಳು, ಆಲ್ಕೋಹಾಲ್ ಅಥವಾ ಮಾದಕ ದ್ರವ್ಯಗಳು ಕಂಡುಬಂದಿಲ್ಲ ಎಂದು ವಿಷ ವಿಜ್ಞಾನ ಹಾಗು ಅಂಗಾಂಗ ಶಾಸ್ತ್ರ ವರದಿಗಳು ದೃಢಪಡಿಸಿವೆ.
ದೇಹದಾದ್ಯಂತ ಬಿದ್ದಿರುವ ಬಲವಾದ ಏಟುಗಳು ಮತ್ತು ತಲೆಗೆ ಆದ ಗಾಯದಿಂದಾಗಿ ಉಂಟಾದ ಆಂತರಿಕ ರಕ್ತಸ್ರಾವ ಮತ್ತು ಮೂತ್ರಪಿಂಡದ ಬಲವಾದ ಗಾಯ ಸಾವಿಗೆ ಕಾರಣವೆಂದು ಅಭಿಪ್ರಾಯಪಡಲಾಗಿದೆ.
