ಐ ಎಂ ಉಗ್ರ ಯಾಸಿನ್ ಭಟ್ಕಳ್ ಕೋರ್ಟ್ ವಿಚಾರಣೆ ಶುರು
ಮಂಗಳೂರು: ಇಂಡಿಯನ್ ಮುಜಾಹಿದ್ದೀನ್ ಶಂಕಿತ ಉಗ್ರ ಯಾಸೀನ್ ಭಟ್ಕಳ ಉಳ್ಳಾಲ ಭಯೋತ್ಪಾದನಾ ಪ್ರಕರಣದ ವಿಚಾರಣೆಗೆ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಈತನ ವಿರುದ್ದದ ಪ್ರಕರಣ ಹಲವಾರು ವರ್ಷಗಳಿಂದ ವಿಚಾರಣೆಯಾಗದೆ ನ್ಯಾಯಾಲಯದಲ್ಲಿ ಬಾಕಿಯಿತ್ತು.
ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಧ್ಯಮಗಳಿಗೆ ಗುಲ್ವಾಲ ಮಾಹಿತಿ ನೀಡಿದ್ದಾರೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಮತ್ತು ಚೆಂಬುಗುಡ್ಡೆ ಎಂಬಲ್ಲಿ ದೇಶದ ವಿವಿಧ ಕಡೆಗಳಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಪೂರ್ವ ತಯಾರಿ ನಡೆಸಿದ ಆರೋಪದ ಮೇರೆಗೆ 2008ರ ಅ. 4 ರಂದು ನಸುಕಿನ ಜಾವ ಪೊಲೀಸರು ದಾಳಿ ನಡೆಸಿದ್ದರು.
ಆಪರೇಷನ್ ಟೆರರ್ ಕಾರ್ಯಾಚರಣೆ ವೇಳೆ ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಆರೋಪಿಗಳು ಸ್ಫೋಟಕ ವಸ್ತುಗಳ ಸಹಿತ ಸಿಕ್ಕಿಬಿದ್ದಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಡಿಸಿಐಬಿ ವಿಭಾಗದ ಇನ್ಸ್ಪೆಕ್ಟರ್ ಡಾ. ಎಚ್ ಎನ್ ವೆಂಕಟೇಶ ಪ್ರಸನ್ನ ಮತ್ತು ಸಿಬ್ಬಂದಿ ಆರೋಪಿಗಳನ್ನು ಪತ್ತೆ ಹಚ್ಚಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸ್ಫೋಟಕ ವಸ್ತುಗಳ ಸಹಿತ ಸಿಕ್ಕಿಬಿದ್ದಿದ್ದ ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ 7 ಜನರನ್ನು ಬಂಧಿಸಲಾಗಿತ್ತು ಮತ್ತು 6 ಜನ ಆರೋಪಿಗಳು ತಲೆಮರೆಸಿಕೊಂಡಿದ್ದರು.
ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿ, ವಿಚಾರಣೆ ನಡೆದು ಆರೋಪಿಗಳಾದ ಸೈಯದ್ ಮೊಹಮ್ಮದ್ ನೌಶಾದ್, ಅಹಮ್ಮದ್ ಬಾವ ಅಬೂಬಕ್ಕರ್ (33), ಫಕೀರ್ ಅಹಮ್ಮದ್ ಯಾನೆ ಫಕೀರ್ ಎಂಬವರಿಗೆ ಯ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಆರೋಪಿಗಳಾದ ಮೊಹಮ್ಮದ್ ಆಲಿ, ಜಾವೇದ್ ಆಲಿ, ಮೊಹಮ್ಮದ್ ರಫೀಕ್ ಮತ್ತು ಶಬ್ಬೀರ್ ಭಟ್ಕಳ್ ಎಂಬವರನ್ನು ಸಾಕ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿ 2017 ರ ಏ. 12ರಂದು ನ್ಯಾಯಾಲಯ ಅಂತಿಮ ತೀರ್ಪು ನೀಡಿತ್ತು ಎಂದು ವಿವರಿಸಿದರು.
ಅಂದು ವಿಚಾರಣಾ ಸಮಯದಲ್ಲಿ ಯಾಸೀನ್ ಭಟ್ಕಳ ತಲೆಮರೆಸಿಕೊಂಡಿದ್ದ ಕಾರಣ ಪ್ರಕರಣದ ವಿಚಾರಣೆ ಬಾಕಿ ಇತ್ತು. ಈತ ಹೈದರಾಬಾದ್ನಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ದೆಹಲಿಯ ತಿಹಾರ್ ಕೇಂದ್ರ ಕಾರಾಗೃಹದಲ್ಲಿ ಶಿಕ್ಷಾ ಕೈದಿಯಾಗಿ ಬಂಧನದಲ್ಲಿದ್ದಾನೆ.
ಈತನನ್ನು ಹಲವಾರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರುಪಡಿಸದೇ ಇರುವುದರಿಂದ ಈತನ ಮೇಲಿನ ಪ್ರಕರಣ ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ಬಾಕಿಯಿತ್ತು. ಈ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿ ಸೂಕ್ತ ಪ್ರಕ್ರಿಯೆಯನ್ನು ಕೈಗೊಂಡು ದೆಹಲಿ ತಿಹಾರ್ ಕೇಂದ್ರ ಕಾರಾಗೃಹದಲ್ಲಿದ್ದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಆರೋಪಿ ಯಾಸೀನ್ ಭಟ್ಕಳ್ನನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ಮಂಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಚಾರಣೆಗೆ ಹಾಜರುಪಡಿಸಿದ್ದಾರೆ. ಮುಂದಿನ ವಿಚಾರಣೆ ಆಗಸ್ಟ್ 20ಕ್ಕೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
