ನಿಮಿಷ ಪ್ರಿಯ ಕುರಿತು ಮನ ಕರಗುವ ಲೇಖನ
ಗೋಪಾಲಕೃಷ್ಣ ಕುಂಟಿನಿ
ಪಾಲಕ್ಕಾಡಿನ ನಿಮಿಷಪ್ರಿಯಾ ಯೆಮನ್ ಗೆ ಹೊರಟು ನಿಂತಾಗ ಅವಳ ವಯಸ್ಸು 20. ಆಗಷ್ಟೇ ನರ್ಸಿಂಗ್ ಸ್ಕೂಲ್ ಪಾಸಾಗಿ ಬಂದಿದ್ದಳು. ಕೇರಳದ ಆಸ್ಪತ್ರೆಯಲ್ಲಿ ಕೆಲಸ ಮಾಡಿದರೆ ಹೆಚ್ಚೆಂದರೆ ತಿಂಗಳಿಗೆ ಮೂರು ಸಾವಿರ ರೂಪಾಯಿ ಬರಬಹುದು. ಅದೇ ಗಲ್ಫ್ ದೇಶಕ್ಕೆ ಹೋದರೆ ಕೈತುಂಬಾ ಸಂಪಾದಿಸಬಹುದು. ಯೆಮೆನ್ ನಲ್ಲಿ ಆಸ್ಪತ್ರೆಗೆ ನರ್ಸುಗಳು ಬೇಕು ಎಂದು ಜಾಹೀರಾತು ಕಂಡಿತು. ಒಂದು ರಿಯಾಲ್ ಗೆ ಸಿಗೋದು 36 ಪೈಸೆ. ಆದರೇನಂತೆ ತಿಂಗಳಿಗೆ 30 ಸಾವಿರಕ್ಕೆ ಕಡಿಮೆ ಇಲ್ಲದಂತೆ ಸಂಬಳ ಕೊಡುತ್ತಾರೆ, ಮಸ್ತ್ ಆಯ್ತಲ್ಲಾ. ನಿಮಿಷ ಪ್ರಿಯಾ ಹೊರಟೇ ಬಿಟ್ಟಳು.
ಎಲ್ಲವೂ ಚೆನ್ನಾಗಿಯೇ ಇತ್ತು. ಸಂಬಳ 50 ಸಾವಿರ ತನಕ ಏರಿಕೆಯಾಯಿತು. ನಿಮಿಷಪ್ರಿಯಾ ಮದುವೆಯೂ ಆಯಿತು. ಮಗಳೂ ಹುಟ್ಟಿದಳು. ಸಂಸಾರ ಯೆಮನ್ ನಲ್ಲಿ ಸುಖವಾಗಿತ್ತು. ಬದುಕಿನ ಕನಸುಗಳು ವಿಸ್ತರಿಸಿದವು. ಆರು ವರ್ಷಗಳು ಕಳೆದಿದ್ದವು. ಗಂಡಹೆಂಡತಿ ತಾವೇ ಒಂದು ಸ್ವಂತ ನರ್ಸಿಂಗ್ ಕ್ಲಿನಿಕ್ ಮಾಡಿದರೆ ಹೇಗೆ ಎಂದು ಯೋಚಿಸಿದರು. ಸಾಲ ಮಾಡಿಕೊಂಡು 16 ಬೆಡ್ ನ ಕ್ಲಿನಿಕ್ ತೆರೆಯಲು ಮುಂದಾದರು. ಆದರೆ, ಯೆಮನ್ ನ ಕಾನೂನು ಏನೆಂದರೆ ಹೊರಗಿನವರು ಸ್ವಂತವಾಗಿ ಅಲ್ಲಿ ಉದ್ಯಮ ಆರಂಭಿಸುವಂತಿಲ್ಲ. ಅದಕ್ಕೆ ಆ ದೇಶದ ಒಬ್ಬರಾದರೂ ಪಾಲುದಾರ ಬೇಕು. ನಿಮಿಷಪ್ರಿಯಾ ದಂಪತಿ ತಮ್ಮ ಪರಿಚಯದ ಜವುಳಿ ವ್ಯಾಪಾರಿ ತಲಾಲ್ ಅಬ್ದೊ ಮಹ್ದಿ ಎಂಬವನನ್ನು ಬಿಸಿನೆಸ್ ಪಾರ್ಟ್ನರ್ ಅಂತ ಮಾಡಿಕೊಂಡರು.
ಇದೆಲ್ಲಾ ಆಗಿ ಮರುವರ್ಷವೇ ಯೆಮೆನ್ ನಲ್ಲಿ ಗಲಭೆಗಳು ಶುರುವಾದವು. ಹೌತಿ ಮಿಲಿಟೆಂಟ್ ಗಳು ರಾಜಧಾನಿಗೆ ನುಗ್ಗಿ ಪಾರ್ಲಿಮೆಂಟ್ ನ್ನು ವಶಪಡಿಸಿಕೊಂಡು,ಅಧ್ಯಕ್ಷನನ್ನು ಒದ್ದೋಡಿಸಿ, ಇಡೀ ಸರಕಾರವನ್ನು ತಮ್ಮದಾಗಿಸಿಕೊಂಡರು. ಈ ವೇಳೆ ಇಲ್ಲಿರುವುದು ಕ್ಷೇಮವಲ್ಲ ಎಂದು ನಿಮಿಷಪ್ರಿಯಾ ಕುಟುಂಬ ನಿರ್ಧರಿಸಿತು. ಆದರೆ ಮಾಡಿಕೊಂಡ ಸಾಲ ಮುಗಿಸಬೇಕಲ್ಲ? ತಾನೇ ಇರುತ್ತೇನೆ, ನೀವು ಹೋಗಿ ಎಂದು ನಿಮಿಷಪ್ರಿಯಾ ಗಂಡ ಮತ್ತು ಮಗಳನ್ನು ಭಾರತಕ್ಕೆ ಕಳುಹಿಸಿದಳು. ಇನ್ನೊಂದು ವರ್ಷದಲ್ಲಿ ಸಾಲ ಮುಗಿಸಿಕೊಂಡು ಊರಿಗೆ ಮರಳುವುದು ಅವಳ ಯೋಜನೆಯಾಗಿತ್ತು.
ಆದರೆ, ಬಿಸಿನೆಸ್ ಪಾರ್ಟ್ನರ್ ಆಗಿದ್ದ ಮಹ್ದಿ ಮಹಾಕಳ್ಳ. ಅವನು ಕ್ಲಿನಿಕ್ ನ್ನು ಮುಳುಗಿಸಿಯೇ ಬಿಟ್ಟ. ನಿಮಿಷಪ್ರಿಯಾ ತನಗಾದ ವಂಚನೆಯ ಕುರಿತು ಪೊಲೀಸ್ ದೂರು ನೀಡಿದಳು. ಮಹ್ದಿಯ ಬಂಧನವೂ ಆಯಿತು. ಕೆಲವು ದಿನಗಳ ಬಳಿಕ ಹೊರಗೆ ಬಂದ ಮಹ್ದಿ ನಿಮಿಷಪ್ರಿಯಾಳಿಗೆ ಇನ್ನಿಲ್ಲದ ಉಪಟಳ ಕೊಡತೊಡಗಿದ.
ಪಾಸ್ ಪೋರ್ಟ್ ಅಡಗಿಸಿಟ್ಟ. ಕೇಳಲು ಹೋದಾಗ ಅತ್ಯಾಚಾರ ಮಾಡಿದ. ಪೊಲೀಸರ ಬಳಿಗೆ ಹೋದರೆ ಅಲ್ಲಿರುವುದು ಹೌತಿಗಳ ಪೊಲೀಸರು. ಅವರು ಹೋಗಮ್ಮಾ ಸಾಕು ಎಂದು ಬೈದು ಅಟ್ಟಿದರು. ನಿಮಿಷಗೆ ಒಂದು ಬಾರಿ ಇಲ್ಲಿಂದ ಓಡಿ ಹೋದರೆ ಸಾಕು ಎಂದಾಗಿತ್ತು.ಅವನ ವಶದಲ್ಲಿರುವ ತನ್ನ ಪಾಸ್ಪೋರ್ಟ್ ವಾಪಾಸ್ಸು ಸಿಕ್ಕಿದರೆ ಸಾಕಿತ್ತು.
2017 ಜುಲೈ ಒಂದು ದಿನ ಆಕೆ ಮೆಹ್ದಿಯ ಕಚೇರಿಗೆ ಹೋದಳು. ಆಗಲೇ ಕುಡಿದು ಬಿದ್ದಿದ್ದ ಅವನಿಗೆ ಮತ್ತು ಬರಿಸುವ ಇಂಜಕ್ಷನ್ ಚುಚ್ಚಿದಳು. ಡೋಸು ಬಲವಾಗಿತ್ತು. ಮೆಹ್ದಿ ಸತ್ತೇ ಹೋದ. ನಿಮಿಷಪ್ರಿಯಾ ಕಂಗಾಲಾದಳು. ತನ್ನ ಗೆಳತಿ ಹನಾನ್ ಜೊತೆ ಸೇರಿ ಮೆಹ್ದಿಯ ಶವವನ್ನು ಕತ್ತರಿಸಿ ನೀರಿನ ಸಂಪಲ್ಲಿ ಹಾಕಿ ಓಡಿಹೋದಳು. ಹೌತಿ ಪೊಲೀಸರು ಬೆನ್ನಟ್ಟಿದರು. ನಿಮಿಷಪ್ರಿಯಾ ಬಂಧನವಾಯಿತು. ವಿಚಾರಣೆ ಮುಗಿಸಿ ಮರಣದಂಡನೆ ಖಾಯಮ್ಮಾಯಿತು. ಹನಾನ್ ಗೆ ಜೀವಾವಧಿ ಶಿಕ್ಷೆ.
ನಿಮಿಷಪ್ರಿಯಾಳ ರಕ್ಷಣೆಗೆ ಶುರುವಾದ ಸೇವ್ ನಿಮಿಷ ಮೂಮೆಂಟ್ ಕೊನೆಕ್ಷಣದ ತನಕ ಹೋರಾಡಿದೆ. ಶರೀಯತ್ ನಿಯಮಾವಳಿಯಲ್ಲಿರುವಂತೆ ಮೆಹ್ದಿ ಕುಟುಂಬಕ್ಕೆ ಎಂಟೂವರೆ ಕೋಟಿ ರೂಪಾಯಿ ಬ್ಲಡ್ ಮನಿ ಕೊಡಲು ಮುಂದಾಗಿದೆ. ಮೆಹ್ದಿ ಕುಟುಂಬ ಬ್ಲಡ್ ಮನಿ ಸ್ವೀಕರಿಸುತ್ತಿಲ್ಲ. ಅದು ನಮ್ಮ ಮರ್ಯಾದೆಯ ಪ್ರಶ್ನೆ ಎನ್ನುತ್ತಿದೆ.
ಕೇಂದ್ರ ಸರಕಾರ ಈ ಸಂಬಂಧ ಯೆಮೆನ್ ಸರಕಾರದ ಜೊತೆ ಮಾತುಕತೆಗೆ ಮುಂದಾಗೋಣ ಎಂದರೆ ಅಲ್ಲಿರುವುದು ಉಗ್ರಗಾಮಿಗಳ ಸರಕಾರ. ಹೌತಿಗಳ ಆಡಳಿತವಿರುವ ಯೆಮೆನ್ ಜೊತೆ ಭಾರತ ಸರಕಾರಕ್ಕೆ ರಾಜತಾಂತ್ರಿಕ ಸಂಬಂಧವಿದ್ದರೂ ಯೆಮೆನ್ ನಲ್ಲಿ ನಮ್ಮ ರಾಯಭಾರಿ ಕಚೇರಿ ಇಲ್ಲ. ನಿನ್ನೆ ಸುಪ್ರೀಂಕೋರ್ಟ್ ನಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ನಾವು ಮಾಡಬಹುದಾದ್ದನ್ನೆಲ್ಲಾ ಮಾಡಿದ್ದಾಗಿದೆ, ಯೆಮೆನ್ ನ ಪ್ರಭಾವಿ ಶೇಖ್ ಒಬ್ಬನ ಮೂಲಕ ಮಾತನಾಡಿಸಿ ನೋಡಿದೆವು, ಪ್ರಯೋಜನವಾಗಿಲ್ಲ. This is not an area where the government can be asked to do something beyond a defined limit ಎಂದು ಕೇಂದ್ರ ಸರಕಾರ ಹೇಳಿದೆ.
ನಾಳೆ ಬುಧವಾರ.
ನಿಮಿಷಪ್ರಿಯಾಳ ಮರಣದಂಡನೆ ನಾಳೆ.
ಯೆಮೆನ್ ಕಾನೂನಿನಂತೆ ಬಹುಶಃ ಅವಳನ್ನು ಸಾರ್ವಜನಿಕವಾಗಿ ಗುಂಡು ಹೊಡೆದು ಸಾಯಿಸಲಾಗುತ್ತದೆ.
ಮತ್ತು
38 ವರ್ಷ ವಯಸ್ಸಿನ ಒಬ್ಬ ಹೆಣ್ಮಗಳ ಚಂದದ ಬದುಕಿನ ಕನಸುಗಳು ಹೀಗೆ ಮುಕ್ತಾಯವಾಗಲಿದೆ.
ಆದರೆ ಅವಳ ಕನಸು ಇನ್ನು ಮುಕ್ತಾಯವಾಗಿಲ್ಲ ಆದರೆ ಬದುಕಿನ ದುಸ್ಸಪ್ನ ಮುಂದೆ ಕಾದಿದೆ
