ಕಾರ್ಕಳ : ಉಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್ ಕುರಿತು ಸುಳ್ಳು ಸುದ್ದಿ ಹಬ್ಬುತ್ತಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕಾರ್ಕಳ ಬಿಜೆಪಿಯು ಬುಧವಾರ ಪೋಲಿಸ್ ಠಾಣಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದೆ.
ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಅವರ ಪರಿಕಲ್ಪನೆಯಂತೆ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ನಿರ್ಮಾಣಗೊಂಡ ಪರಶುರಾಮ ಥೀಮ್ ಪಾರ್ಕ್ ಕಾರ್ಕಳದ ಒಂದು ಕನಸಿನ ಯೋಜನೆ.
ಸಮುದ್ರ ಮಟ್ಟದಿಂದ ಸುಮಾರು 500 ಅಡಿ ಎತ್ತರ ಪ್ರದೇಶದ ಬೆಟ್ಟದಲ್ಲಿರುವ ಪರಶುರಾಮ ಮೂರ್ತಿಯನ್ನು ಮತ್ತಷ್ಟು ಬಲವರ್ಧನೆ ಮಾಡುವ ಉದ್ದೇಶದಿಂದ ಮೂರ್ತಿಯ ಮರು ವಿನ್ಯಾಸ ಕಾರ್ಯಕ್ಕಾಗಿ ನಿರ್ಮಾಣ ಸಂಸ್ಥೆಯು ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಮೂರ್ತಿಯನ್ನು ಥೀಮ್ ಪಾರ್ಕ್‌ನಿಂದ ಸ್ಥಳಾಂತರ ಮಾಡಲಾಗಿತ್ತು.
ಆದರೆ ಜಿಲ್ಲಾಡಳಿತದ ಆದೇಶವನ್ನು ಗಣನೆಗೆ ತೆಗೆದುಕೊಳ್ಳದೇ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಉದಯ ಕುಮಾರ್ ಶೆಟ್ಟಿ ಮುನಿಯಾಲು ಮತ್ತವರ ಬೆಂಬಲಿಗರ ತಂಡ ಪ್ರತಿಮೆಯ ಕುರಿತು ಪತ್ರಿಕಾ ಗೋಷ್ಠಿಗಳಲ್ಲಿ, ಸಭೆ ಸಮಾರಂಭಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿ ಕಾರ್ಕಳದ ಘನತೆಗೆ ಧಕ್ಕೆ ಉಂಟು ಮಾಡಿದ್ದಾರೆ.
ಬೇರೆ ಬೇರೆ ಸಂದರ್ಭದಲ್ಲಿ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಡಳಿತ ಪ್ರತಿಮೆಯ ಕುರಿತು ಯಾವುದೇ ವ್ಯತ್ಯಾಸ ಆಗಿಲ್ಲ ಎಂದು ಸ್ಪಷ್ಟಿಕರಣ ನೀಡಿದರೂ ಸಹ ವ್ಯವಸ್ಥಿತ ಪಿತೂರಿ ನಡೆಸಿ ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶ ನೀಡುತ್ತಾ ಬಂದಿದ್ದಾರೆ ಎಂದು ಮನವಿಯಲ್ಲಿದೆ.
ಸ್ವಯಂ ಪ್ರೇರಿತ ದೂರು ದಾಖಲಿಸಿ
ಪ್ರಸ್ತುತ ರಾಜ್ಯ ಸರಕಾರದ ತನಿಖಾ ಸಂಸ್ಥೆಯು ಪರಶುರಾಮ ಥೀಂ ಪಾರ್ಕ್ ಮೂರ್ತಿಯ ಕುರಿತು ತನಿಖೆ ನಡೆಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಪ್ರತಿಮೆಯನ್ನು ಫೈಬರ್‌ನಿಂದ ಮಾಡಿದ್ದಲ್ಲ ಎಂಬುದಾಗಿ ವರದಿಯಿದೆ.
ಆದರೆ, ಪರಶುರಾಮ ಮೂರ್ತಿಯನ್ನು ಫೈಬರ್‌ನಿಂದ ಮಾಡಲಾಗಿದೆ ಹಾಗೂ ಕಳ್ಳತನ ಆಗಿದೆ ಎಂದು ಅಪಪ್ರಚಾರ ಮಾಡಿ ಕಾರ್ಕಳದ ಪ್ರವಾಸೋದ್ಯಮ ಹಾಗೂ ಕಾರ್ಕಳದ ಘನತೆಗೆ ಕಾಂಗ್ರೆಸ್‌ನವರು ಧಕ್ಕೆ ಉಂಟು ಮಾಡಿರುತ್ತಾರೆ. ಗೃಹ ಸಚಿವರು ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಅಪಪ್ರಚಾರ ನಡೆಸುವವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿ ಕಠಿಣ ಕಾಣೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಮನವಿಯಲ್ಲಿ ಆಗ್ರಹಿಸಿದೆ.
ಪ್ರತಿಮೆಯ ಕುರಿತು ಸುಳ್ಳು ಸುದ್ದಿ ಹಬ್ಬಿಸಿ, ಪ್ರತಿಮೆ ಕಳ್ಳತನ ಆಗಿದೆ ಎಂದು ಅಪಪ್ರಚಾರ ನಡೆಸಿದ ಉದಯ ಶೆಟ್ಟಿ ಮುನಿಯಾಲು ಮತ್ತು ಅವರ ಬೆಂಬಲಿಗರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು- ಕಾರ್ಕಳ ಬಿಜೆಪಿ.
- ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಕಾರ್ಕಳ ಮಂಡಲ ಬಿಜೆಪಿ ಕಾರ್ಯದರ್ಶಿಗಳಾದ ಬೋಳ ಸತೀಶ್ ಪೂಜಾರಿ, ಸುರೇಶ್ ಶಿವಪುರ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷೆ ವಿನಯ ಡಿ. ಬಂಗೇರ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.
