- ಪೊಲೀಸ್ ಚಾರ್ಜ್ ಶೀಟ್: ಶಿಲ್ಪಿ ಕೃಷ್ಣ ನಾಯಕ್, ನಿರ್ಮಿತಿ ಅರುಣ್ ಕುಮಾರ್, ಸಚಿನ್ ವೈ ಕುಮಾರ್ ತಪ್ಪಿತಸ್ಥರು
ಆರೋಪ ಪಟ್ಟಿಯಲ್ಲಿ ಶಾಸಕ ಸುನಿಲ್ ಕುಮಾರ್ ಪ್ರಸ್ತಾಪವೇ ಇಲ್ಲ
ಕಾರ್ಕಳ: ಬೈಲೂರು ಉಮಿಕಲ್ ಬೆಟ್ಟದ ಮೇಲಿನ ಥೀಮ್ ಪಾರ್ಕ್‌ನಲ್ಲಿನ ಪರಶುರಾಮ ಪ್ರತಿಮೆ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಎಲ್ಲಕ್ಕಿಂತಲೂ ಹೆಚ್ಚು ಆರೋಪಕ್ಕೆ ಗುರಿಯಾಗಿದ್ದ ಅಂದಿನ ಸಚಿವ, ಇಂದಿನ ಶಾಸಕ ವಿ ಸುನಿಲ್ ಕುಮಾರ್ ಅವರ ಉಲ್ಲೇಖ ದೋಷಾರೋಪ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ಶಾಸಕ ಸುನಿಲ್ ಕುಮಾರ್ ಆರೋಪ ಮುಕ್ತ ಎಂದೇ ಬಿಜೆಪಿ ಮತ್ತು ಸುನಿಲ್ ಕುಮಾರ್ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಇನ್ನೊಂದೆಡೆ ವಿರೋಧಿ ಪಾಳಯದ ಕಾಂಗ್ರೆಸ್ ಮತ್ತು ಮುನಿಯಾಲು ಉದಯಕುಮಾರ್ ಶೆಟ್ಟಿ ಬೆಂಬಲಿಗರು ಆರೋಪಿಸಿರುವಂತೆ ಅದು ಫೈಬರ್ ಪ್ರತಿಮೆ ಅಲ್ಲ ಎನ್ನುವುದು ಕೂಡ ಆರೋಪ ಪಟ್ಟಿಯಲ್ಲಿರುವ ವಿವರಗಳಿಂದ ಸಾಬೀತಾಗಿದೆ ಎಂದು ಬಿಜೆಪಿ ಬೆಂಬಲಿಗರು ಜಾಲತಾಣದಲ್ಲಿ ಹರ್ಷ, ಇದು ಬಿಜೆಪಿಗೆ ಸಂದ ಗೆಲುವು ಎಂದು ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.
ಈ ಮೂಲಕ ಸುನಿಲ್ ಕುಮಾರ್ ರಾಜಕೀಯದಲ್ಲಿ ಕಪ್ಪು ಚುಕ್ಕೆ ಯಾಗಿ ಉಳಿಯಲಿದ್ದ ಈ ಒಂದು ಆರೋಪ ಜಾರಿ ಹೋಗಿದೆ ಎನ್ನುವುದು ಬಲಪಂಥೀಯ ವಿಶ್ಲೇಷಕರಅಭಿಪ್ರಾಯ.
ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಗುರುತರ ವಾದಂತಹ ಜವಾಬ್ದಾರಿ ಹೊರಲಿರುವ ಸುನಿಲ್ ಕುಮಾರ್ ಅವರನ್ನು ಸ್ವಚ್ಛ ರಾಜಕಾರಣಿ ಎಂದು ಬಿಂಬಿಸಲು ಒಂದು ವರ್ಗ ಪ್ರಯತ್ನಿಸುತ್ತಿದ್ದು ಈ ದೋಷಾರೋಪ ಪಟ್ಟಿಯನ್ನು ಸುನಿಲ್ ಕುಮಾರ್ ಪರವಾಗಿ ಬಳಸಿಕೊಳ್ಳಲು ಸಿದ್ಧತೆ ನಡೆಸಿದೆ. ವ್ಯಕ್ತಿತ್ವಕ್ಕೆ ಇದು ಹೊಳಪು ನೀಡದಿದ್ದರೂ ಕಪ್ಪು ಚುಕ್ಕೆ ಅಳಿಸಬಹುದೋ ಎನ್ನುವ ಆಸೆ ಬೆಂಬಲಿಗರದ್ದು.
ಇನ್ನೊಂದಡೆ ಕಾಂಗ್ರೆಸ್ ಎಂದಿನಂತೆ ಆರೋಪದಲ್ಲಿ ತೊಡಗಿದ್ದರೂ ದೋಷಾರೋಪ ಪಟ್ಟಿಯಲ್ಲಿ ಫೈಬರ್ ಎನ್ನುವ ವಿಚಾರ, ಸುನಿಲ್ ಕುಮಾರ್ ತಪ್ಪಿತಸ್ಥ ಎನ್ನುವ ಉಲ್ಲೇಖ ಆಗದ ಹಿನ್ನೆಲೆಯಲ್ಲಿ ಹಿಂದಿನಷ್ಟು ಹುರುಪು ಆಕ್ರೋಶ ಕಂಡು ಬರುತ್ತಿಲ್ಲ.
- ಆದರೂ ಪರಶುರಾಮ ಪ್ರತಿಮೆ ಕಂಚಿನಿಂದ ಮಾಡಿಲ್ಲ, ಹಿತ್ತಾಳೆಯಿಂದ ಮಾಡಿರೋದು ಸಾಬೀತಾಗಿದ್ದು ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸತೊಡಗಿದ್ದಾರೆ.
ಇಂದಿನವರೆಗಿನ ಆರೋಪ ಪ್ರತ್ಯಾರೋಪದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು, ಸುನಿಲ್ ಕುಮಾರ್ ಅವರನ್ನು ಕಳಂಕರೇತ ರಾಜಕಾರಣಿ ಎಂದು ಸಾಧಿಸಲು ಭರಪೂರ ಪ್ರಯತ್ನ ಮಾಡಿದ್ದು ಯಶಸ್ಸು ಪಡೆಯುವ ದಾರಿಯಲ್ಲಿದೆ.
ದೋಷಾರೋಪ ಪಟ್ಟಿಯಲ್ಲಿ ಏನಿದೆ?
ಪೋಲಿಸ್ ತನಿಖೆಯಿಂದ ಪ್ರತಿಮೆಯನ್ನು ಹಿತ್ತಾಳೆಯಿಂದ ತಯಾರಿಸಲಾಗಿದೆ ಎಂದು ತಿಳಿದುಬಂದಿದೆ, ಆದರೆ ಒಪ್ಪಂದದ ಪ್ರಕಾರ ಅದು ಕಂಚಿನಿಂದ ಇರಬೇಕಿತ್ತು. ಶಿಲ್ಪಿ ಕೃಷ್ಣ ನಾಯ್ಕ, ಅರುಣ್ ಕುಮಾರ್ ಮತ್ತು ಸಚಿನ್ ವೈ ಕುಮಾರ್ ಅವರ ವಿರುದ್ಧ ಹಲವು ಆರೋಪ ಕೇಳಿಬಂದಿವೆ.
ಪೊಲೀಸರು 1231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಕಾರ್ಕಳದ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದರಲ್ಲಿ ಶಿಲ್ಪಿ ಕೃಷ್ಣ ನಾಯ್ಕ ಕಂಚಿನ ಲೋಹದಿಂದ ಪರಶುರಾಮ ಮೂರ್ತಿಯನ್ನು ನಿರ್ಮಾಣ ಮಾಡದೇ, ಹಿತ್ತಾಳೆ ಲೋಹದಿಂದ ಪರಶುರಾಮ ಮೂರ್ತಿ ನಿರ್ಮಾಣ ಮಾಡಿರುವುದು ತಜ್ಞರ ಪರಿಶೀಲನಾ ವರದಿಯಿಂದ ಹಾಗೂ ತನಿಖೆಯಿಂದ ಸಾಬೀತಾಗಿದೆ.
ಒಪ್ಪಂದದ ಪ್ರಕಾರ ಪ್ರತಿಮೆಯನ್ನು ಕಂಚಿನಿಂದ ನಿರ್ಮಿಸಬೇಕೆಂದಿದೆ. ಆದರೆ ಪ್ರತಿಮೆ ಹಿತ್ತಾಳೆಯದ್ದಾಗಿದೆ. ಇನ್ನು, ಪ್ರತಿಮೆ ಫೈಬರ್ನದ್ದು ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಾಕ್ಷಿ ಇಲ್ಲದೆ ಇರುವುದರಿಂದ ಸದ್ಯಕ್ಕೆ ಕಾಂಗ್ರೆಸ್ ಕೊಂಚ ಹಿನ್ನಡೆ ಅನುಭವಿಸಿದೆ.
ಆರೋಪಿಗಳಾದ ಶಿಲ್ಪಿ ಕೃಷ್ಣ ನಾಯ್ಕ, ಉಡುಪಿ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಡೈರೆಕ್ಟರ್ ಅರುಣ ಕುಮಾರ್ ಹಾಗೂ ಇಂಜಿನಿಯರ್ ಸಚಿನ್ ವೈ ಕುಮಾರ್ ಇವರುಗಳು ಅಪರಾಧಿಕ ಒಳಸಂಚು ಮತ್ತು ನಂಬಿಕೆ ದ್ರೋಹ ಮತ್ತು ವಂಚನೆ ಎಸಗಿ, ಸಾಕ್ಷಿ ನಾಶ ಮಾಡಿದ್ದಾರೆ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ಇವರ ವಿರುದ್ಧ ಕಲಂ. 420, 409, 201, 120 (ಬಿ) ಜೊತೆಗೆ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪರಶುರಾಮ ಥಿಂ ಪಾರ್ಕ್ ವಿವಾದ
2023ರ ಜನವರಿ 27 ರಂದು ಪರಶುರಾಮ ಥೀಂ ಪಾರ್ಕನ್ನು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು.
ಬಳಿಕ ಸ್ಥಾಪಿಸಲಾಗಿದ್ದ ಪರಶುರಾಮ ಮೂರ್ತಿಯನ್ನು ಫೈಬರ್ನಿಂದ ನಿರ್ಮಿಸಲಾಗಿದೆ. ಕಂಚಿನ ಪ್ರತಿಮೆ ಅಲ್ಲ ಎಂದು ಕಾಂಗ್ರೆಸ್ ನಾಯಕರು ಮತ್ತು ಸ್ಥಳೀಯರು ಆರೋಪ ಮಾಡಿದ್ದರು.
ಒಂದು ಹಂತದಲ್ಲಿ ಯುವ ಮೋರ್ಚಾ ಮುಖಂಡ ಸುಹಾಸ್ ಶೆಟ್ಟಿ ಮುಟ್ಲು ಪಾಡಿ ಪರಶುರಾಮ ಮೂರ್ತಿಗೆ ಸುತ್ತೆಯಿಂದ ಬಡಿದು ಬಂದ ಶಬ್ದದಿಂದಾಗಿ ಇದು ಕಂಚು ಎಂದು ಸಾಬೀತು ಆಗಿದೆ ಎಂದು ತಪಾಸಣೆ ಮಾಡಿ ದ್ದರು. ಇದು ಟ್ರೋಲಿಗೂ ಒಳಗಾಗಿತ್ತು. ಇದೀಗ ಅವರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ವಿಚಾರವೂ ಟ್ರೋಲ್ ಆಹಾರವಾಗಿದೆ
ಆರೋಪ ಪ್ರತ್ಯಾರೋಪಗಳ ಬಳಿಕ ಈ ಸಂಬಂಧ 2024 ರ ಜೂನ್ 21 ಕೃಷ್ಣ ಶೆಟ್ಟಿ ಎಂಬುವರು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ “ಕ್ರಿಶ್ ಆರ್ಟ್ ವರ್ಲ್ಡ್ ಸಂಸ್ಥೆಯು ಕಂಚಿನ ಪರಶುರಾಮ್ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ ಹಣ ಪಡೆದಿತ್ತು. ಆದರೆ, ಆರೋಪಿ ಶಿಲ್ಪಿ ಕೃಷ್ಣ ನಾಯ್ಕ ಕಂಚಿನ ಮೂರ್ತಿ ಮಾಡದೇ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.
ಬಳಿಕ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಪರಶುರಾಮ ಮೂರ್ತಿಯ ಶಿಲ್ಪಿ ಕೃಷ್ಣ ನಾಯ್ಕ ಕಂಚಿನ ಲೋಹದಿಂದ ಪರಶುರಾಮ ಮೂರ್ತಿ ನಿರ್ಮಿಸದೆ, ಕಡಿಮೆ ಮೌಲ್ಯದ ಹಿತ್ತಾಳೆ ಲೋಹದಿಂದ ಪರಶುರಾಮ ಮೂರ್ತಿ ನಿರ್ಮಿಸಿರುವುದು ತಜ್ಞರ ಪರಿಶೀಲನಾ ವರದಿಯಿಂದ ಹಾಗೂ ತನಿಖೆಯಿಂದ ಸಾಬೀತಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ
