CRIME NEWS
ಧರ್ಮಸ್ಥಳ: ಅನೇಕ ಹೆಣ ಹೂತಿದ್ದೇನೆ ಎಂದ ಅಜ್ಞಾತ ವ್ಯಕ್ತಿ ಕೋರ್ಟಿಗೆ ಹಾಜರು
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ತಪ್ಪೊಪ್ಪಿಕೊಂಡಿರುವ ಅನಾಮಧೇಯ ವ್ಯಕ್ತಿಯ ಪರವಾಗಿ ವಕೀಲರ ತಂಡ ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಗೆ ನೀಡಿದ ದೂರಿನ ಪ್ರಕರಣಕ್ಕೆ ಸಂಬಂಧಿಸಿ ಪಾಪಪ್ರಜ್ಞೆಯ ಅಜ್ಞಾತ ವ್ಯಕ್ತಿ ಇಂದು ಬೆಳ್ತಂಗಡಿ ಕೋರ್ಟಿಗೆ ಹಾಜರಾಗಿದ್ದಾನೆ.

ಧರ್ಮಸ್ಥಳದಲ್ಲಿ ಅನೇಕ ಹೆಣಗಳನ್ನು ಹೂತಿದ್ದೇನೆ ಎಂದು ಹೇಳಿಕೊಂಡ ವ್ಯಕ್ತಿ ಬೆಳ್ತಂಗಡಿ ಕೋರ್ಟಿಗೆ ವಕೀಲರ ಜೊತೆ ಹಾಜರಾಗಿದ್ದಾನೆ
ಈ ಪಾಪ ಪ್ರಜ್ಞೆ ಯಿಂದಾಗಿ ಅಜ್ಞಾತ ವ್ಯಕ್ತಿ ತಪ್ಪೊಪ್ಪಿಕೊಂಡು ಹೇಳಿಕೆ ನೀಡಿದ್ದಾನೆ ಎಂಬ ವಕೀಲರ ಪತ್ರದಿಂದ ಸಂಚಲನ ಸೃಷ್ಟಿಯಾಯಿತು. ಇದರ ಬೆನ್ನಲ್ಲೇ ಕೆಲವೊಂದು ವೆಬ್ ನ್ಯೂಸ್ ಗಳು ಫೇಕ್ ಸುದ್ದಿಗಳನ್ನು ಹಾಕಿ ಕೇಸು ಜಡಿದುಕೊಂಡಿದ್ದೂ ಆಗಿತ್ತು.
ಆರೋಪ ಸಾಬೀತು ಪಡಿಸುತ್ತಾರೋ ಎನ್ನುವುದಕ್ಕಿಂತಲೂ ಹೆಚ್ಚಾಗಿ ಈ ಮುಖ ಮುಚ್ಚಿದವನ ಕುರಿತು ತಿಳಿಯುವ ಸಸ್ಪೆನ್ಸ್ ಜನರಲ್ಲಿ ಕುತೂಹಲವನ್ನ ಹೆಚ್ಚಿಸಿದೆ.
ಇದರ ಲಾಭವನ್ನು ಪಡೆಯಲು ಮಾಧ್ಯಮಗಳು ಅತಿರಂಜಿತ ಸುದ್ದಿಗಳನ್ನು ಪ್ರಕಟಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮೀಡಿಯಾ ಟ್ರಯಲ್ ಮಾಡುವಾಗ ಸುಪ್ರೀಂಕೋರ್ಟ್ ಮಾರ್ಗ ಸೂಚಿ ಪಾಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
ಜುಲೈ 4 ರಂದು ವಕೀಲರ ಮೂಲಕ ದೂರು ನೀಡಿದ್ದ ಈ ವ್ಯಕ್ತಿ ಬೆಳ್ತಂಗಡಿ ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಅವರ ಮುಂದೆ ಇಂದು ಹೇಳಿಕೆ ನೀಡಿದ್ದಾನೆ.
ವಕೀಲರು ಮತ್ತು ಪೊಲೀಸರ ಕಾವಲಿನಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ ಅಜ್ಞಾತ ವ್ಯಕ್ತಿ ಮುಖವನ್ನ ಸಂಪೂರ್ಣ ಕವರ್ ಮಾಡಿ ಸಂಜೆ 4:00 ವೇಳೆಗೆ ಕೋರ್ಟಿಗೆ ಆಗಮಿಸಿ ಹೇಳಿಕೆ ನೀಡಿದ್ದಾನೆ.