DAKSHINA KANNADA
ಮೊಬೈಲ್ ದಾಸರಾಗದಿರಲು ಯಕ್ಷಗಾನ ಅಭ್ಯಾಸ ಮದ್ದು: ಸಂತೋಷ್ ರೈ ಬೊಳಿಯಾರ್
ಈಗಿನ ಕಾಲದ ಯುವಜನರು ಹಠಾತ್ ಹೃದಯಾಘಾತದಿಂದ ಸಾಯುವುದು ಒಂದೆಡೆಯಾದರೆ ಇನ್ನೊಂದೆಡೆ ಮೊಬೈಲ್‌ನಲ್ಲಿ ಪಟಪಟ, ತಟಪಟ ಮಾಡುತ್ತಾ ಕಾಲಕ್ಷೇಪದಲ್ಲಿ ತೊಡಗುತ್ತಾರೆ. ಇದು ಹೆತ್ತವರಿಗೆ ಸಂಕಟ. ಇದನ್ನು ಪರಿಹರಿಸಲು ಯಕ್ಷಗಾನ ಪ್ರೇಮಿ ಸಂತೋಷ್ ರೈ ಬೊಳಿಯಾರ್ ಸಲಹೆ ನೀಡಿದ್ದಾರೆ.
ಮಂಗಳೂರು: ಇಂದು ಮಕ್ಕಳು ಮೊಬೈಲ್ ದಾಸರಾಗಿದ್ದಾರೆ ಕಾರಣ ಕೇವಲ ಪಠ್ಯಕ್ಕೆ ಸೀಮಿತವಾದ ಶಿಕ್ಷಣ. ಮಕ್ಕಳಿಗೆ ಓದಿನೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಒತ್ತನ್ನು ನೀಡಿದಾಗ ಸಮಯವನ್ನು ಕೂಡ ಸದುಪಯೋಗ ಪಡೆಸಿಕೊಳ್ಳುತ್ತಾರೆ. ಇದರಿಂದ ಮನೆಯಲ್ಲಿ ಮೊಬೈಲ್ ಮುಕ್ತ ವಾತಾವರಣ ಸೃಷ್ಟಿ ಯಾಗುತ್ತದೆ. ಯಕ್ಷಗಾನ ಕಲಿಯುವುದರಿಂದ ವಿದ್ಯಾರ್ಥಿಗಳಲ್ಲಿ ದೈಹಿಕ , ಮಾನಸಿಕ, ಆಧ್ಯಾತ್ಮಿಕ ಅಭಿವೃದ್ಧಿಯಾಗುವುದರೊಂದಿಗೆ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಡಿಪು ಘಟಕದ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರು ಅಭಿಪ್ರಾಯ ಪಟ್ಟರು.
ಹರೇಕಳ ಶ್ರೀರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ಯಕ್ಷದ್ರುವ ಪಟ್ಲ ಪೌಂಡೇಶನ್ ವತಿಯಿಂದ ನಡೆದ ಉಚಿತ ಯಕ್ಷದ್ರುವ ಯಕ್ಷ ಶಿಕ್ಷಣ ತರಬೇತಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಯಕ್ಷಧ್ರುವ ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕ ವಾಸುದೇವ ಐತಾಳ್, ಯಕ್ಷಗಾನ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ . ಇದರಿಂದ ಪಠ್ಯಕ್ಕೂ ಪ್ರಯೋಜನ ಆಗುತ್ತದೆ. ಮಾತ್ರವಲ್ಲದೇ ವಿದ್ಯಾರ್ಥಿಗಳಲ್ಲಿ ನಾಟ್ಯ , ಮಾತುಗಾರಿಕೆ, ಸೃಜನಶೀಲತೆ, ಮುಂತಾದವುಗಳು ಅಭಿವೃದ್ಧಿ ಹೊಂದುವುದರೊಂದಿಗೆ ಸಂಸ್ಕಾರವೂ ಬೆಳೆಯುತ್ತದೆ ಎಂದರು.
ವಿದ್ಯಾ ಸಂಸ್ಥೆಗಳ ಸಂಚಾಲಕ ಕಡೆಂಜ ಸೋಮಶೇಖರ್ ಚೌಟ ಅಧ್ಯಕ್ಷತೆ ವಹಿಸಿದ್ದರು. ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ರೈ ವೇದಿಕೆಯಲ್ಲಿ ಇದ್ದರು.
ಯಕ್ಷಗಾನ ಗುರುಗಳಾದ ಅಶ್ವಥ್ ಮಂಜಿನಾಡಿ ಯಕ್ಷಗಾನ ತರಬೇತಿಯನ್ನು ನಡೆಸಿಕೊಟ್ಟರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮೋಹಿನಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ ಪ್ರಸ್ತಾವನೆ ಗೈದರು.
ಶಿಕ್ಷಕ ರವಿಶಂಕರ್ ವಂದಿಸಿದರು.