INDIA

ಎತ್ತಿನಹೊಳೆಗೆ ಎಳ್ಳು ನೀರು! ಕೋಟಿ ನುಂಗಿದ್ದೆ ಬಂತು, ನೀರು ಬರಲೇ ಇಲ್ಲ ಬರುವುದು ಡೌಟು

Share

ಎತ್ತಿನಹೊಳೆ ಯೋಜನೆಗೆ ಕೇಂದ್ರದಿಂದ ರೆಡ್ ಸಿಗ್ನಲ್

ದಿಗ್ವಿಜಯ ನ್ಯೂಸ್ ಬ್ಯೂರೊ

 ಹಾಸನ ಜಿಲ್ಲೆಯ ಸಕಲೇಶಪುರ ಪರಿಸರದಿಂದ ಬಯಲು ಸೀಮೆಯ ಜಿಲ್ಲೆಗಳಿಗೆ ನೀರು ಹರಿಸುವ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಗೆ ಇದೀಗ ಕೇಂದ್ರ ಸರ್ಕಾರ ಕೆಂಪು ನಿಶಾನೆ ತೋರಿಸಿದೆ. ಈ ಮೂಲಕ ಕುಂಟುತ್ತಾ ಸಾಗಿರುವ ಎತ್ತಿನಹೊಳೆ ಯೋಜನೆಗೆ ಎಳ್ಳು ನೀರು ಬಿಡುವ ಲಕ್ಷಣ ಕಾಣಿಸುತ್ತಿದೆ.

ಯೋಜನೆಗೆ ಅಗತ್ಯವಿದ್ದ ಹೆಚ್ಚುವರಿ 423 ಎಕರೆ ಅರಣ್ಯ ಭೂಮಿ ಬಳಕೆಗೆ ಕೇಂದ್ರ ಪರಿಸರ ಸಚಿವಾಲಯ ಅನುಮೋದನೆ ಕೊಟ್ಟಿಲ್ಲ. ಪರಿಣಾಮ, ಯೋಜನೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಎದುರಾಗಿದೆ.

ಎತ್ತಿನಹೊಳೆ ಕಾಮಗಾರಿ ಮಂದಗತಿ

ಹಾಸನ ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಯ 432 ಎಕರೆ ಅರಣ್ಯ ಭೂಮಿಯನ್ನು ‘ಗುರುತ್ವಾಕರ್ಷಣೆ ಕಾಲುವೆ’ ನಿರ್ಮಾಣಕ್ಕೆ ಬಳಸುವ ನಿಟ್ಟಿನಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ಕೇಂದ್ರಕ್ಕೆ ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು.
ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿಯ ಅಧೀನದಲ್ಲಿದ್ದ ಡಿಐಜಿಎಫ್ ಪ್ರಣಿತಾ ಪೌಲ್ ನೇತೃತ್ವದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿತ್ತು.

ಜೂನ್ 26ರಂದು ದೆಹಲಿಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಹೆಚ್ಚುವರಿ ಅರಣ್ಯ ಭೂಮಿ ಬಳಕೆ ಪ್ರಸ್ತಾವನೆ ಕುರಿತು ಚರ್ಚೆಯಾಗಿತ್ತು. ಅಂತಿಮವಾಗಿ ಕೇಂದ್ರ ಅರಣ್ಯ ಇಲಾಖೆಯು ಹೆಚ್ಚುವರಿ ಅರಣ್ಯ ಭೂಮಿ ಬಳಕೆಗೆ ಅನುಮತಿ ನೀಡಿಲ್ಲ. ಯೋಜನೆಗೆ ಅರಣ್ಯ ಭೂಮಿ ಬಳಕೆಗೆ ಕೇಂದ್ರ ಪರಿಸರ ಸಚಿವಾಲಯದಿಂದ ಅನುಮೋದನೆ ಲಭ್ಯವಾಗುವ ಮೊದಲೇ ಅರಣ್ಯ ಭೂಮಿಯನ್ನು ಬಳಸಲಾಗಿದೆ ಎಂದು ಡಿಐಜಿಎಫ್ ಪ್ರಣಿತಾ ಪೌಲ್ ನೇತೃತ್ವದ ಅಧಿಕಾರಿಗಳ ತಂಡ ಕೇಂದ್ರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿತ್ತು.

ಎತ್ತಿನಹೊಳೆ ಕಾಮಗಾರಿ

ಕುಂಟುತ್ತಾ ಸಾಗಿದ ಎತ್ತಿನಹೊಳೆ ಕಾಮಗಾರಿ

ಅನುಮೋದನೆ ಲಭ್ಯವಾಗುವ ಮೊದಲೇ ಅರಣ್ಯ ಭೂಮಿಯನ್ನು ಬಳಸಿ ಯೋಜನೆಯಲ್ಲಿ ಭಾಗಿಯಾದ ಸರ್ಕಾರಿ ಅಧಿಕಾರಿಗಳು ಅರಣ್ಯ ನಿಯಮ ಉಲ್ಲಂಘಿಸಿರುವುದಾಗಿ ಸಮಿತಿಯು ವರದಿ ಸಲ್ಲಿಸಿದ್ದು, ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂಬ ಶಿಫಾರಸು ಮಾಡಿದೆ. ಜೊತೆಗೆ, ಲೋಪಗಳನ್ನು ಸರಿಪಡಿಸಿ ಸಮಜಾಯಿಷಿ ನೀಡಿದ ಬಳಿಕ ಮಾತ್ರ ಮುಂದಿನ ಸಭೆಯಲ್ಲಿ ಪ್ರಸ್ತಾವನೆ ಪರಿಗಣನೆಗೆ ಒಳಪಡಬಹುದೆಂದು ಸೂಚಿಸಿದೆ.

2009ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಎತ್ತಿನಹೊಳೆ ಸೇರಿದಂತೆ ಮತ್ತಿತರೆ ಕೆಲವು ಹಳ್ಳಗಳಿಂದ 8 ಟಿಎಂಸಿ ನೀರನ್ನು ತಂದು ಕೇವಲ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತವಾದ ಶುದ್ಧ ಕುಡಿಯುವ ನೀರನ್ನು ಪೂರೈಸುವ ಉದ್ದೇಶದಿಂದ ಆರಂಭವಾದ ಯೋಜನೆ, 2014ರ ಲೋಕಸಭಾ ಚುನಾವಣೆಯ ಮುಂದೆ ಚಿಕ್ಕಬಳ್ಳಾಪುರದಲ್ಲಿ ಗುದ್ದಲಿ ಪೂಜೆ ನೆರವೇರಿಸುವ ವೇಳೆಗೆ ಯೋಜನೆಯ ವ್ಯಾಪ್ತಿ 7 ಜಿಲ್ಲೆಗಳಿಗೆ ಹರಡಿತ್ತು.

  • ಅದರ ಪ್ರಕಾರ ಹಾಸನ, ಚಿಕ್ಕಮಗಳೂರು, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ 38 ಪಟ್ಟಣಗಳ, 6,657 ಗ್ರಾಮಗಳ ಸುಮಾರು 75 ಲಕ್ಷ ಜನರಿಗೆ ಶಾಶ್ವತ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದು ಮತ್ತು 527 ಕೆರೆಗಳನ್ನು ತುಂಬಿಸಿ ಅಂತರ್ಜಲ ಮರುಪೂರಣ ಮಾಡುವುದಾಗಿ ಬದಲಾಗಿತ್ತು. ಯೋಜನೆಯ ಆರಂಭಿಕ ಯೋಜನಾ ವೆಚ್ಚ 8,323 ಕೋಟಿ ಇದ್ದದ್ದು, ನಂತರ 2013ರಲ್ಲಿ 12,912 ಕೋಟಿಗಳಿಗೆ ಏರಿಕೆಯಾಗಿತ್ತು. ಈಗ ಮತ್ತೊಮ್ಮೆ 2023ರಲ್ಲಿ 23,251 ಕೋಟಿಗಳಿಗೆ ಹೆಚ್ಚಳವಾಗಿದೆ.
    ಆದರೆ ಯೋಜನೆ ಹಣ ನುಂಗಿದ್ದೆ ಬಂತು ನೀರು ಬರಲಿಲ್ಲ.

ಎತ್ತಿನಹೊಳೆ ಯೋಜನೆಗೆ 2016 ರಲ್ಲೇ 13.93 ಹೆಕ್ಟೇರ್ ಅರಣ್ಯ ಭೂಮಿ ಬಳಕೆಗೆ ಕೇಂದ್ರವು ಅನುಮೋದನೆ ನೀಡಿದ್ದು, 33 ಷರತ್ತುಗಳನ್ನು ವಿಧಿಸಿತ್ತು. ಆದರೆ ಬಹುತೇಕ ಷರತ್ತುಗಳನ್ನು ಈವರೆಗೆ ಪಾಲನೆ ಮಾಡಲಾಗಿಲ್ಲ. ಕಾಮಗಾರಿಯ ವೇಳೆ ಭೂಕುಸಿತ, ಮಣ್ಣಿನ ಕೊರೆತ, ಮನೆಗಳ ಹಾನಿ ಮುಂತಾದ ಪರಿಸರ ಭೀತಿಗಳು ಉಂಟಾಗಿದ್ದು, ಯಾವುದೇ ಪರಿಹಾರ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂಬ ತೀವ್ರ ಆಕ್ಷೇಪಗಳನ್ನು ಎನ್‌ಜಿಟಿ ಮೇಲ್ವಿಚಾರಣಾ ತಂಡವು 2019ರ ವರದಿಯಲ್ಲಿ ಉಲ್ಲೇಖಿಸಿತ್ತು.

ಎತ್ತಿನಹೊಳೆ ನದಿಯಿಂದ ಸುಮಾರು 24 ಟಿಎಂಸಿ ನೀರನ್ನು ಬಯಲುಸೀಮೆಯ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು, ರಾಮನಗರ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳತ್ತ ಪೂರ್ವಾಭಿಮುಖವಾಗಿ ಹರಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಯೋಜನೆಯ ಮೊದಲ ಹಂತದ ಕಾಮಗಾರಿ 2024ರ ಸೆಪ್ಟೆಂಬರ್​​ನಲ್ಲಿ ಸಕಲೇಶಪುರದಲ್ಲಿ ಉದ್ಘಾಟನೆಯಾಗಿತ್ತು.

ಎತ್ತಿನಹೊಳೆ ಯೋಜನೆಯ ನೀರಿನ ಇಳುವರಿ ಕೇವಲ 8.5 ಟಿಎಂಸಿ ಇದ್ದು, ಕಟ್ಟ ಕಡೆಯ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೀರು ತಲುಪುವುದು ಅಸಾಧ್ಯ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್ ಆಂಜನೇಯ ರೆಡ್ಡಿ ಕಿಡಿಕಾರಿದ್ದರು.

ಹಠ ಹಿಡಿದು ಬೆಟ್ಟ ಅಗೆದು ಇಲಿ ಹಿಡಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು 21ನೇ ಶತಮಾನ ಕಂಡ ಬಹುದೊಡ್ಡ ಮೋಸದ ಎತ್ತಿನಹೊಳೆ ಯೋಜನೆಗೆ ಇಂದು ಸಕಲೇಶಪುರದಲ್ಲಿ ಗುಂಡಿ ಒತ್ತಿ ಚಾಲನೆ ಕೊಡಲಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸರ್ಕಾರದಿಂದ ಅನುಮೋದಿಸಲ್ಪಟ್ಟ ಮೂಲ ವಿಸ್ತೃತ ಯೋಜನಾ ವರದಿಯಯಂತೆ (DPR) ಪೂರ್ವಾಭಿಮುಖವಾಗಿ ಹರಿಯಬೇಕಿದ್ದ ಎತ್ತಿನಹೊಳೆಯನ್ನು ಉದ್ದೇಶಿತ ಮೂಲ ಪಥವನ್ನೇ ಬದಲಿಸಿ ವೇದಾವತಿ ವ್ಯಾಲಿ ಮೂಲಕ ವಾಣಿ ವಿಲಾಸ ಸಾಗರಕ್ಕೆ ಹರಿಸುತ್ತೇವೆಂದು ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು ಆಗಿರುವ ಡಿಕೆ ಶಿವಕುಮಾರ್ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಎತ್ತಿನಹೊಳೆಯಿಂದ ಎರಡೇ ವರ್ಷದಲ್ಲಿ, ಮೂರೇ ವರ್ಷದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ಶುದ್ಧ ಕುಡಿಯುವ ನೀರು ಹರಿಸುತ್ತೇವೆಂದು ಪುಂಖಾನುಪುಂಖವಾಗಿ ಭಾಷಣಗಳನ್ನು ಬಿಗಿದ ರಾಜಕಾರಣಿಗಳು ಈಗ ಎಲ್ಲಿದ್ದಾರೆ, ಯಾವ ಬಿಲ ಸೇರಿದ್ದಾರೋ ಗೊತ್ತಿಲ್ಲ ಎಂದು ಆಕ್ಷೇಪಿಸಿದ್ದರು.

 

ಬದ್ಧತೆ ಇದ್ದಿದ್ದರೆ ಎತ್ತಿನಹೊಳೆ ಯೋಜನೆಯ ಪೂಜೆಯನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಕೆರೆಯನ್ನು ತುಂಬಿಸಿ, ನಂಗಲಿ ಗ್ರಾಮದ ಜನರಿಗೆ ಕುಡಿಯುವ ನೀರನ್ನು ಪೂರೈಸಿ ಅಲ್ಲಿ ಪೂಜೆ ಮಾಡಬೇಕಿತ್ತು. ಆಗ ಈ ಯೋಜನೆ ಸಾಕಾರಗೊಳುತ್ತಿತ್ತು. ಅದು ಅಸಾಧ್ಯ ಎಂಬುದು ಮುಖ್ಯಮಂತ್ರಿಗಳಿಗೂ ಗೊತ್ತಿದೆ.

 

To Top