ಉಳ್ಳಾಲದ ಪೊಲೀಸ್ ದರ್ಪಕ್ಕೆ ಸೌಮ್ಯ ಮಾರ್ಗದ ಉತ್ತರ
ಉಳ್ಳಾಲದಲ್ಲಿ ಸಮಸ್ತ ಹಿಂದುಗಳು 78 ವರ್ಷಗಳಿಂದಲೂ ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದ ಶಾರದೋತ್ಸವಕ್ಕೆ ಪೊಲೀಸ್ ಇಲಾಖೆಯಿಂದಲೇ ಕಪ್ಪು ಚುಕ್ಕೆ ಇಟ್ಟ ಘಟನೆಯು ನಡೆದಿರುವುದು ವಿಪರ್ಯಾಸ ಎಂದು ಭಕ್ತರು ಅಭಿಪ್ರಾಯ ಪಟ್ಟರು.
ಉಳ್ಳಾಲದಲ್ಲಿ ಅತ್ಯಂತ ಶಾಂತ ರೀತಿಯಲ್ಲಿ, ಸೌಮ್ಯ ರೀತಿಯಲ್ಲಿ, ಸಂಭ್ರಮದಿಂದ ಶ್ರೀ ಶಾರದಾ ಉತ್ಸವದ ಮೆರವಣಿಗೆಯು ಮುನ್ನಡೆಯುತ್ತಿದ್ದ ಸಂದರ್ಭದಲ್ಲಿ ತಾಸೆಯ ಕೋಲನ್ನು ಕಿತ್ತೆಸೆದು ಹಾಗೂ ಮೈಕ್ಗಳನ್ನು ಬಂದ್ ಮಾಡಿಸಿ ಪೋಲೀಸ್ ಇಲಾಖೆಯು ದರ್ಪಮೆರೆದಿರುವುದರ ವಿರುದ್ದ ಉಳ್ಳಾಲದ ಹಿಂದೂ ಸಮಾಜವು ಸೌಮ್ಯ ಮಾಗದಲ್ಲಿ ಪ್ರತಿಭಟಿಸಿದೆ.
ಉಳ್ಳಾಲದ ಎಲ್ಲ ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಪೊಲೀಸರ ಕ್ರಮವನ್ನು ಖಂಡಿಸಲಾಯಿತು ಹಾಗೂ 130 ಜನರ ಮೇಲೆ ಎಫ್ಐಆರ್ ಹಾಕಿರುವುದನ್ನು ವಿರೋಧಿಸಿ, ಕೇಸ್ ಹಿಂದೆ ಪಡೆಯುವಂತೆ ಆಗ್ರಹಿಸಲಾಯಿತು.
ಉಳ್ಳಾಲ ಪರಿಸರದ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಶ್ರೀ ವ್ಯಾಘ್ರಚಾಮುಂಡೇಶ್ವರೀ ದೇವಸ್ಥಾನ, ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ, ಶ್ರೀ ಸೀತರಾಮ ದೇವಸ್ಥಾನ, ಶ್ರೀ ನಾಗಬ್ರಹ್ಮಾದಿ ಪಂಚದೈವಿಕ ಸನ್ನಿಧಿ, ಶ್ರೀ ವೀರಭದ್ರ ದುರ್ಗಾ ಪರಮೇಶ್ವರೀ ದೇವಸ್ಥಾನ, ಶ್ರೀ ವಲಚಿಲತ್ತಾಯ ದೇವಸ್ಥಾನ, ಶ್ರೀ ರಾಹುಗುಳಿಗ ಬನ, ಶ್ರೀ ಉಳಿಯ ಧರ್ಮರಸರ ಕ್ಷೇತ್ರ, ಶ್ರೀ ಮಲರಾಯ ದೈವಸ್ಥಾನ, ಸ್ವಾಮಿ ಗುಳಿಗಜ್ಜ- ಕೊರಗಜ್ಜ ಕಟ್ಟೆ, ಶ್ರೀ ಚೀರುಂಭ ಭಗವತಿ ಕ್ಷೇತ್ರ ಹಾಗೂ ಶ್ರೀ ವಿಠೋಭ ರುಖುಮಾಯಿ ಭಜನಾ ಮಂದಿರ, ಅಯ್ಯಪ್ಪ ಮಂದಿರ, ಶ್ರೀ ಶಾರದಾ ನಿಕೇತನ, ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ, ವಿದ್ಯಾಂಜನೇಯ ವ್ಯಾಯಾಮ ಶಾಲೆಸೇರಿದಂತೆ ಎಲ್ಲಾ ಭಜನಾ ಮಂದಿರಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಕೊರಗ ತನಿಯ ಗುಡಿ ಕೆರೆಬೈಲು, ತೊಕ್ಕೋಟು, ತಲಪಾಡಿ, ಮಾಡೂರು, ತಾರಿಪಡ್ಪು ಪ್ರದೇಶದ ದೈವ-ದೇವಸ್ಥಾನಗಳಲ್ಲೂ ಪ್ರಾರ್ಥನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಪಧಾಧಿಕಾರಿಗಳು ಸೇರಿದಂತೆ ಆಯಾಯ ದೇವಸ್ಥಾನಗಳ ಪಧಾಧಿಕಾರಿಗಳು ಉಪಸ್ಥಿತರಿದ್ದರು. ಈ ರೀತಿಯ ಪ್ರಾರ್ಥನೆಯು ದಕ್ಷಿಣ ಕನ್ನಡದ ಇತಿಹಾಸದಲ್ಲಿಯೇ ಪ್ರಥಮ.
