ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿನೀಡಿ ಸಚಿವರು ಮೊದಲು ದೇವರ ದರ್ಶನ ಪಡೆದು ನಂತರ ಸಾರ್ವಜನಿಕರ ಮನವಿಯನ್ನು ಆಲಿಸಿದರು.
ಮಂಗಳೂರು ವಿಮಾನ ನಿಲ್ದಾಣದಿಂದ ಕುಕ್ಕೆಗೆ ಒಂದೆರಡು ತಿಂಗಳಲ್ಲಿ ಮೂರು ಬಸ್ ಗಳ ವ್ಯವಸ್ಥೆ ಮಾಡಲಾಗುವುದು ಹಾಗೂ ಶಾಲಾ-ಕಾಲೇಜು ಮಕ್ಕಳಿಗೆ ಬಸ್ ನಿಲ್ಲಿಸದೇ ಇದ್ದಲ್ಲಿ ನೇರವಾಗಿ ನನಗೆ ದೂರು ನೀಡಿ ಎಂದು ಸಚಿವರು ಪ್ರಶ್ನೆಗೆ ಉತ್ತರಿಸಿದರು.
*ಕೇಂದ್ರದ ಪ್ರಸಾದ ಯೋಜನೆ*
ಕೇಂದ್ರದ ಪ್ರಸಾದ ಯೋಜನೆಗೆ ಈಗಾಗಲೇ ರಾಜ್ಯದ ೫೪ ದೇವಸ್ಥಾನಗಳ ಪಟ್ಟಿ ಕಳುಹಿಲಾಗಿದೆ. ಪ್ರಸಾದ ಯೋಜನೆಯು ದೇಶಾದ್ಯಂತ ನಡೆಸಲಾಗುತ್ತಿದ್ದು, ಇದರಲ್ಲಿ ರಾಜ್ಯದ ನಾಲ್ಕು ದೇವಸ್ಥಾನಕ್ಕೆ ಅನುದಾನ ಬಂದಿದೆ. ಮೈಸೂರಿಗೆ ೩೦ ಕೋಟಿ, ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ೩೪ ಕೋಟಿ, ಇತರೆ ಎರಡು ದೇವಸ್ಥಾನಕ್ಕೆ ೧೫ ಲಕ್ಷ ಬಂದಿದೆ ಎಂದರು.
*ಕಡಬಕ್ಕೆ ಬಸ್ ನಿಲ್ದಾಣಕ್ಕೆ*
ಕಡಬಕ್ಕೆ ಬಸ್ ನಿಲ್ದಾಣಕ್ಕೆ ಗುರುತಿಸಲಾದ ಜಾಗಕ್ಕೆ ರಸ್ತೆಗೆ ಜಾಗ ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಮೂಲಕ ಜಾಗ ಮಾಡಿಕೊಳ್ಳಿ ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರಲ್ಲಿ ಸೂಚಿಸಿದರು.
*ಸುಬ್ರಹ್ಮಣ್ಯ ಕೆಎಸ್‌ಆರ್‌ಟಿಸಿ ಡಿಪೋ ಬೇಡಿಕೆ*
ಸುಬ್ರಹ್ಮಣ್ಯಕ್ಕೆ ಕೆಎಸ್‌ಆರ್‌ಟಿಸಿ ಡಿಪೋ ಬೇಡಿಕೆ ಇದೆ. ಅದಕ್ಕೆ ಯೇನೆಕಲ್ಲಿನಲ್ಲಿ ಜಾಗ ಗುರುತಿಸಲಾಗಿದ್ದು ಕಂದಾಯ ಸಚಿವರ ಮೂಲಕ ಪರಿಶೀಲನೆ ನಡೆಸಲಾಗುವುದು ಎಂದರು.
*ಕುಕ್ಕೆಯಲ್ಲಿ ೨೪ ಗಂಟೆ ಆರೋಗ್ಯ ಸೇವೆ ಭರವಸೆ:*
ಕುಕ್ಕೆಯಲ್ಲಿ ಸುಸಜ್ಜಿತ ಆಸ್ಪತ್ರೆ ಬೇಡಿಕೆ ಈ ಹಿಂದಿನಿಂದಲೂ ಇದೆ. ತಕ್ಷಣಕ್ಕೆ ನಮಗೆ ದೇವಸ್ಥಾನದ ಆಸು-ಪಾಸಿನಲ್ಲಿ ಜಾಗ ಕೊಟ್ಟಲ್ಲಿ ೨೪ ಗಂಟೆ ಆರೋಗ್ಯ ಸೇವೆ ನೀಡುವ ಕೇಂದ್ರ ಮಾಡುತ್ತೇವೆ. ಈ ಬಗ್ಗೆ ಆರೋಗ್ಯ ಸಚಿವರಲ್ಲಿ ಮಾತನಾಡುತ್ತೇನೆ. ಸುಬ್ರಹ್ಮಣ್ಯ ಆಸ್ಪತ್ರೆಗೆ ವೈದ್ಯರ, ಸಿಬ್ಬಂದಿ ನೇಮಕದ ಬಗ್ಗೆಯೂ ಆರೋಗ್ಯ ಸಚಿವರಲ್ಲಿ ಮಾತನಾಡುತ್ತೇನೆ ಎಂದರು.
*ಆಶ್ಲೆಷ ಬಲಿ ಪೂಜಾ ಮಂದಿರ ನಿರ್ಮಾಣದ ಆದೇಶ ಪತ್ರ ಹಸ್ತಾಂತರ:*
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬಳಿಯ ಆದಿ ಸುಬ್ರಹ್ಮಣ್ಯ ರಸ್ತೆಯ ಬಲಭಾಗದಲ್ಲಿ ತುಳುಸಿತೋಟ ಎಂಬಲ್ಲಿ ದಾನಿಗಳಾದ ಮಾಜಿ ಸಚಿವ ಮಾಲೂರು ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರ ವತಿಯಿಂದ ನಿರ್ಮಾಣವಾಗಲಿರುವ ಆಶ್ಲೇಷ ಬಲಿ ಪೂಜಾ ಮಂದಿರದ ನಿರ್ಮಾಣ ಕಾಮಗಾರಿಗೆ ದಾನಿಗಳಿಗೆ ಸಚಿವ ರಾಮಲಿಂಗ ರೆಡ್ಡಿ ಆದೇಶ ಪತ್ರ ಹಸ್ತಾಂತರಿಸಿ ದಾನಿಗಳನ್ನು ಗೌರವಿಸಿದರು. ಆಶ್ಲೇಷ ಮಂದಿರಕ್ಕೆ ಶಂಕುಸ್ಥಾಪನೆ ಸಮಾರಂಭ ಎಂದು ಪೂಜೆ ಮತ್ತಿತರ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಲಾಗಿತ್ತು, ಆದರೆ ಆಶ್ಲೇಷ ಬಲಿ ಪೂಜಾ ಮಂದಿರಕ್ಕೆ ಈ ಮೊದಲೇ ಶಂಕುಸ್ಥಾಪನೆ ನೆರವೇರಿಸಲಾಗಿದ್ದರಿಂದ, ಶಂಕುಸ್ಥಾಪನೆ ಕಾರ್ಯಕ್ರಮವನ್ನು ರದ್ದುಗೊಳಿಸಿ, ದಾನಿಗಳಿಗೆ ಆದೇಶ ಪತ್ರ ಹಸ್ತಾಂತರಿಸಿ, ದೇವರ ಪ್ರಸಾದ ನೀಡಿ ಗೌರವಿಸಲಾಯಿತು.
*ಸಭೆ-ಪರಿಶೀಲನೆ:*
ರಾಮಲಿಂಗ ರೆಡ್ಡಿ ಅವರು ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಮಾಸ್ಟರ್ ಪ್ಲಾನ್ ಸಭೆ ನಡೆಸಿದರು. ಸಭೆಯಲ್ಲಿ ೩ ಹಂತದ ಮಾಸ್ಟರ್ ಪ್ಲಾನ್ ಯೋಜನೆಯ ಕಾಮಗಾರಿಗಳ ಬಗ್ಗೆ ಚರ್ಚಿಸಲಾಗಿ, ದೇವಸ್ಥಾನದ ಸುತ್ತು ಪೌಳಿ, ಪಾರಂಪರಿಕ ಶೈಲಿಯ ರಥಬೀದಿ, ೫೦೦೦ ಮಂದಿಗೆ ಏಕ ಕಾಲದಲ್ಲಿ ಭೋಜನ ಪ್ರಸಾದ ವಿತರಿಸುವ ಕೊಠಡಿ, ವಸತಿ ಕಟ್ಟಡ, ಸಿಬ್ಬಂದಿಗಳ ವಸತಿ ಗ್ರಹ ಮತ್ತಿತರ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯ ಬಳಿಕ ಸಚಿವರು ಇಂಜಾಡಿ, ಆದಿ ಸುಬ್ರಹ್ಮಣ್ಯ, ಹೊಸ ಆಶ್ಲೇಷ ಮಂದಿರ ನಿರ್ಮಾಣವಾಘಲಿರುವ ಸ್ಥಳ, ಎಸ್‌ಎಸ್‌ಪಿಯು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದರು.
ಈ ಸಂಧರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಮುಜರಾಯಿ ಇಲಾಖೆ ಆಯುಕ್ತ ವೆಂಕಟೇಶ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಮಲ್ಲಿಕಾ ಪಕ್ಕಳ, ವಿವಿಧ ಇಲಾಖೆ ಅಧಿಕಾರಿಗಳು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಮಾಸ್ಟರ್ ಪ್ಲಾನ್ ಸದಸ್ಯರು ಉಪಸ್ಥಿತರಿದ್ದರು.