KARNATAKA

ಸಮಿತ್ ರಾಜ್ ಬಂಧನ ರಾಜಕೀಯ ಷಡ್ಯಂತ್ರ: ಹಿಂಜಾವೆ ಆರೋಪ

Posted on

Share

ಮಂಗಳೂರು : ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ಧರೆಗುಡ್ಡೆ ಅವರ ಬಂಧನವನ್ನು ಸಂಘಟನೆ ತೀವ್ರವಾಗಿ ಖಂಡಿಸಿದ್ದು, ಈ ಕ್ರಮದ ಹಿಂದೆ ರಾಜಕೀಯ ಪ್ರೇರಣೆಯಿದೆಯೆಂಬ ಗಂಭೀರ ಆರೋಪ ಕೇಳಿಬಂದಿದೆ.
ಆರು ತಿಂಗಳ ಹಿಂದೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಸ್ ಚಾಲಕನ ಅಜಾಗರೂಕತೆಯಿಂದ ಬೈಕ್ ಹಾಗೂ ರಿಕ್ಷಾಗೆ ಡಿಕ್ಕಿಯಾಗಿ ಸವಾರರು ಗಂಭೀರ ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ಗಾಯಾಳು ಬಡ ಕುಟುಂಬಕ್ಕೆ ಬಸ್ ಮಾಲಿಕರಿಂದ ಸ್ಥಳದಲ್ಲೇ ಪರಿಹಾರ ನೀಡುವಂತೆ ಒತ್ತಾಯಿಸಿ, ಸಮಿತ್ ರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು.
ಪರಿಣಾಮವಾಗಿ, ಪೊಲೀಸರ ನೇತೃತ್ವದಲ್ಲಿ ಪರಿಹಾರದ ಹಣವನ್ನು ಬಸ್ ಮಾಲಿಕರಿಂದ ಬಡ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿತ್ತು. ಆದರೆ, ಘಟನೆಯ ವೇಳೆ ಕೆಲ ವಿದ್ಯಾರ್ಥಿಗಳು ಬಸ್ಸಿಗೆ ಹಾನಿ ಮಾಡಿದ್ದು, ಬಸ್ ಮಾಲಿಕ ಠಾಣೆಗೆ ದೂರು ನೀಡಿದ್ದರು. ಈ ದೂರು ಹಿನ್ನೆಲೆಯಲ್ಲಿ ನಿನ್ನೆ ಯಾವುದೇ ನೋಟಿಸ್ ನೀಡದೇ ಸಮಿತ್ ರಾಜ್ ಅವರನ್ನು ಬಂಧಿಸಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ವೇದಿಕೆಯ ಪ್ರತಿಕ್ರಿಯೆ:
ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆ ಪತ್ರಿಕಾ ಪ್ರಕಟಣೆಯಲ್ಲಿ, “ನೊಂದ ಬಡ ಕುಟುಂಬಕ್ಕೆ ನ್ಯಾಯ ಒದಗಿಸಲು ನಡೆಯುತ್ತಿರುವ ಹೋರಾಟವನ್ನು ಅಪರಾಧವೆಂದು ಪರಿಗಣಿಸಿ, ಹಿಂದೂ ನಾಯಕರನ್ನು ಗುರಿಯಾಗಿಸಿ ಬಂಧಿಸುವುದು ಜನಸಾಮಾನ್ಯರ ಹಕ್ಕುಗಳ ಮೇಲೆ ಹಲ್ಲೆ,” ಎಂದು ತಿಳಿಸಿದೆ. ಈ ಬಂಧನದ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂಬ ಆರೋಪ ಮುಂದಿಟ್ಟಿದ್ದು, “ಈ ಪ್ರಕರಣದಲ್ಲಿ ಕೈಜೋಡಿಸಿದ ಪೊಲೀಸರನ್ನೂ ಬಂಧಿಸಬೇಕೆಂದು ಆಗ್ರಹಿಸುತ್ತೇವೆ” ಎಂದಿದೆ.
ವೇದಿಕೆ ಇದೊಂದು ಹಿಂದೂ ವಿರೋಧಿ ನಾಟಕದ ಎರಡನೇ ಅಧ್ಯಾಯವಾಗಿರುವುದಾಗಿ ಆರೋಪಿಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮುಂದುವರಿದರೆ ಹಿಂದೂ ಸಮಾಜವನ್ನು ಜೊತೆಗೆ ಸೇರಿಸಿಕೊಂಡು ಕಾನೂನುಬದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

Leave a Reply

Your email address will not be published. Required fields are marked *

Most Popular

Exit mobile version