LATEST NEWS

ಮಕ್ಕಳ ಕಳ್ಳ ಸಾಗಾಟ: ಮೂವರಿಗೆ ಶಿಕ್ಷೆ

Posted on

Share

ಮಂಗಳೂರು : ಸುಮಾರು 12 ವರ್ಷದ ಹಿಂದೆ ನಡೆದಿದ್ದ ಮಕ್ಕಳ ಕಳ್ಳ ಸಾಗಾಟ ಪ್ರಕರಣದ ಮೂವರು ಆರೋಪಿಗಳಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಶಿಕ್ಷೆ ಘೋಷಿಸಿದೆ. ಆರೋಪಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಸೋಮವಾರ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿದೆ.

ಲೆನೆಟ್ ವೇಗಸ್, ಜೊಸ್ಸಿ ವೇಗಸ್, ಲಸ್ಸಿ ವೇಗಸ್ ಶಿಕ್ಷೆಗೊಳಗಾದ ಅಪರಾಧಿಗಳು. 2013ರಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮನೆ ಮನೆಗೆ ತೆರಳಿ ಮಕ್ಕಳ ಸಮೀಕ್ಷೆ ಮಾಡುವ ಸಂದರ್ಭ ಲೆನೆಟ್ ವೇಗಸ್‌ರ ಎಂಬವರ ಮನೆಯಲ್ಲಿ ಮಾರಾಟಕ್ಕೆ ಮಗು ವನ್ನು ಇಟ್ಟಿರುವ ಬಗ್ಗೆ ಮಾಹಿತಿ ಪಡೆದು ಪತ್ರಕರ್ತ ನವೀನ್ ಸೂರಿಂಜೆಯ ಗಮನಕ್ಕೆ ತಂದಿದ್ದರು. ನಂತರ ಚೈಲ್ಡ್‌ಲೈನ್ ಸಂಸ್ಥೆಯವರು ಲೆನೆಟ್ ಮನೆಗೆ ತೆರಳಿ ಮಗುವಿನ ಕುರಿತು ವಿಚಾರಿಸಿದಾಗ ಮಗು ತನ್ನದೇ ಎಂದು ಲೆನೆಟ್ ವಾದಿಸಿದ್ದರು. ಮಗುವನ್ನು ತಾನೇ ಹೆತ್ತಿದ್ದೆ ಎಂಬುದಕ್ಕೆ ಮಂಗಳೂರಿನ ನರ್ಸಿಂಗ್ ಹೋಂ ಒಂದರ ಡಿಸ್ಚಾರ್ಜ್ ದಾಖಲೆ ತೋರಿಸಿದ್ದಳು. ಆದರೆ ರಾತ್ರಿ-ಹಗಲು ಕಾರ್ಯಾಚರಣೆ ಮಾಡಿ ಮಗುವಿನ ನಿಜ ತಾಯಿಯನ್ನು ಪತ್ತೆ ಹಚ್ಚಲಾಗಿತ್ತು.
ಆ ಮಗು ಉತ್ತರ ಕರ್ನಾಟಕದ ಚೆನ್ನವ್ವ ಎಂಬವರದ್ದಾಗಿತ್ತು. ಕಟ್ಟಡದ ಕೆಲಸಕ್ಕೆ ಬಂದಿದ್ದ ಚೆನ್ನವ್ವ ಬಡತನದ ಬೇಗೆ ತಡೆಯಲಾರದೆ ಮಗುವನ್ನು ಸುಮಾರು 20 ಸಾವಿರ ರೂಪಾಯಿಗಳಿಗೆ ಲೆನೆಟ್‌ಗೆ ಮಾರಾಟ ಮಾಡಿದ್ದಳು. ಪತ್ರಕರ್ತರ ಮೂಲಕ ಮಾಹಿತಿ ಪಡೆದ ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್, ಚೈಲ್ಡ್ ಲೈನ್‌ನ ರೆನ್ನಿ ಡಿಸೋಜ, ಅಸುಂತ ಡಿಸೋಜ ಹಾಗೂ ಅಂಗನವಾಡಿ ಕಾರ್ಯಕರ್ತೆ ಅಂದಿನ ಪೊಲೀಸ್ ಕಮಿಷನರ್‌ರನ್ನು ಭೇಟಿಯಾಗಿ ಮಾಹಿತಿ ನೀಡಿದರು.
ಪೊಲೀಸ್ ಕಮಿಷನರ್‌ರ ಸಹಕಾರದ ಮೇರೆಗೆ ದುಬೈನ ದಂಪತಿಗೆ ಮಗು ಬೇಕಾಗಿದೆ ಎಂದು ಲೆನೆಟ್ ತಿಳಿಸಿದ್ದು, ಅದರಂತೆ ತೊಕ್ಕೊಟ್ಟಿನ ವೈದ್ಯರ ಕ್ಲಿನಿಕ್‌ಗೆ ಮಗುವಿನ ಆರೋಗ್ಯ ತಪಾಸಣೆಗೆ ಬರಲಿಕ್ಕಿದೆ. ಮಗುವಿನ ಹೆಲ್ತ್ ಚೆಕಪ್ ಮಾಡಿ ಮಗುವನ್ನು ಮಾರಾಟ ಮಾಡುತ್ತೇನೆ. ಅಲ್ಲೇ ಹಣ ಕೊಟ್ಟು ಮಗು ಖರೀದಿಸಿ ಎಂದು ಲೆನೆಟ್ ಹೇಳಿದ ಮೇರೆಗೆ ಕ್ಲಿನಿಕ್‌ನಿಂದಲೇ ಮಗುವನ್ನು ಖರೀದಿಸುವ ಬಗ್ಗೆ ಕಾರ್ಯಾಚರಣೆ ನಡೆಸಲಾಯಿತು.
ಕಮಿಷನರ್‌ ಸೂಚನೆ ಮೇರೆಗೆ ಪೊಲೀಸ್ ಕಾನ್‌ಸ್ಟೇಬಲ್ ಇರ್ಫಾನ್ ಕೂಡ ಕಾರ್ಯಾಚರಣೆಯ ಭಾಗವಾಗಿದ್ದರು. ಕೊನೆಗೆ 90 ಸಾ.ರೂ.ವನ್ನು ಕೊಟ್ಟು ಮಗುವನ್ನು ಪಡೆದುಕೊಳ್ಳುವಷ್ಟರಲ್ಲಿ ಲೆನೆಟ್‌ ಳನ್ನು ಅಲ್ಲೇ ಇದ್ದ ಪೊಲೀಸರು ಬಂಧಿಸಿ, ಆಕೆಯ ಬಳಿ ಇದ್ದ ಎಲ್ಲಾ ನಕಲಿ ಸರ್ಟಿಫಿಕೇಟ್‌ಗಳು, ಎಟಿಎಂ ಕಾರ್ಡ್‌ಗಳು, ದೆಹಲಿ ವಿಳಾಸದ ನಕಲಿ ವಿಸಿಟಿಂಗ್ ಕಾರ್ಡ್‌ಗಳು, ಮಗುವಿನ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಯಿತು. ಚೆನ್ನವ್ವಳನ್ನು ಪತ್ತೆ ಹಚ್ಚಿ ಆಕೆಯದ್ದೇ ಮಗುವೆಂದು ದಾಖಲೆಗಳ ಸಹಿತ ನಿರೂಪಿಸಿ ಎಫ್‌ಐಆರ್ ದಾಖಲಿಸಲಾಗಿತ್ತು. ಲೆನೆಟ್‌ಗೆ ಸಹಕರಿಸಿದ ಜೊಸ್ಸಿ ವೇಗಸ್, ಲಸ್ಸಿ ವೇಗಸ್ ಮೇಲೂ ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಕೋರ್ಟ್‌ ಮೂವರನ್ನು ಅಪರಾಧಿಗಳು ಎಂದು ಗುರುತಿಸಿದೆ.

 

 

Leave a Reply

Your email address will not be published. Required fields are marked *

Most Popular

Exit mobile version