ಚಾಮರಾಜಗರ: ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳ ಸಾವಿಗೆ ವಿಷಪ್ರಾಷನವೇ ಕಾರಣ ಅನ್ನೋದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಿಡಿಗೇಡಿಗಳು ಸತ್ತ ಹಸುವಿನ ಕಳೇಬರದಲ್ಲಿ ವಿಷವಿಕ್ಕಿ ತಾಯಿ ಹಾಗೂ 4 ಮರಿ ಹುಲಿಗಳನ್ನು ಕೊಂದಿರುವುದಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಖಚಿತಪಡಿಸಿದ್ದಾರೆ. ಈ ನಡುವೆ ತನಿಖೆ ಚುರುಕುಗೊಳಿಸಿದ್ದ ಅರಣ್ಯಾಧಿಕಾರಿಗಳು ಹುಲಿಗಳಿಗೆ ವಿಷ ಹಾಕಿದ್ದ ದುಷ್ಕರ್ಮಿಯೊಬ್ಬ ಸೇರಿ 6 ಜನರನ್ನ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ತನ್ನ ದನದ ಮೇಲೆ ಹುಲಿ ದಾಳಿಯಿಂದ ಕೋಪಗೊಂಡ ಮಾಲೀಕ ಕಳ್ಳಬ್ಬೆದೊಡ್ಡಿ ಗ್ರಾಮದ ಶಿವಣ್ಣ ಹಸುವಿನ ಕಳೇಬರಕ್ಕೆ ವಿಷ ಸಿಂಪಡಣೆ ಮಾಡಿದ್ದ. ಈ ಕೃತ್ಯದಲ್ಲಿ ಶಿವಣ್ಣನ ಮಗನೂ ಭಾಗಿಯಾಗಿದ್ದ ಎನ್ನಲಾಗಿದೆ.
ವಿಷ ಸಿಂಪಡಿಸಿದ್ದ ಕಳೇಬರವನ್ನು ತಿಂದು ಐದು ಹುಲಿಗಳು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಆರೋಪಿ ಶಿವಣ್ಣನನ್ನ ವಶಕ್ಕೆ ಪಡೆಯುತ್ತಿದ್ದಂತೆ ಮಗ ಗ್ರಾಮದಿಂದ ಪರಾರಿಯಾಗಿದ್ದಾನೆ.
ಶಿವಣ್ಣ ಎಂಬಾತನ ಜೊತೆಗೆ ಅದೇ ಗ್ರಾಮದ ಐವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
