ಪುತ್ತೂರು : ಪ್ರೌಢಶಾಲೆಯಲ್ಲಿ ಪ್ರೇಮಾಂಕುರವಾಗಿ ಕಾಲೇಜು ಮೊದಲ ವರ್ಷದಲ್ಲಿ ಮಗುವಿಗೆ ಪ್ರೇಮಿ ಜನ್ಮ ಕೊಟ್ಟಾಗ ಅಪ್ಪ ಅನಿಸಿಕೊಂಡಾತ ಮದುವೆಗೆ ಒಲ್ಲೆ ಎಂದ.
ಗರ್ಭಿಣಿ ವಿದ್ಯಾರ್ಥಿನಿ ಶುಕ್ರವಾರ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಬೆನ್ನಲ್ಲಿಯೇ ಅಪ್ಪ ಎನಿಸಿಕೊಂಡ ಯುವಕ ಕಿಟ್ಟ ತಲೆ ಮರೆಸಿಕೊಂಡಿದ್ದಾನೆ.
ಪುರಾಣ ಕಾಲದ ಕೃಷ್ಣ ಹುಟ್ಟುವಾಗ ಅಪ್ಪ ಅಮ್ಮ ಜೈಲ್‌ನಲ್ಲಿದ್ದರೆ ಇಲ್ಲಿ ಮಗ ಹುಟ್ಟಿದ ವೇಳೆ ಜೈಲು ಸೇರುವ ಮುಹೂರ್ತ ಈ ಕೃಷ್ಣ ಗೆ ಒದಗಿ ಬಂದಿದೆ.
ವಿದ್ಯಾರ್ಥಿನಿ ಗರ್ಭಿಣಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಮುಖಂಡ ಯಕ್ಷಗಾನ ಚೆಂಡೆ ಕಲಾವಿದರ ಅವರ ಪುತ್ರ ಕೃಷ್ಣ ವಿರುದ್ಧ ಈಗಾಗಲೇ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ನಂಬಿಕೆ ದ್ರೋಹದ ಪ್ರಕರಣ ದಾಖಲಾಗಿದೆ. ಇದೀಗ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದಾನೆ.
ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಯುವತಿ ನೀಡಿರುವ ದೂರಿನ ಪ್ರಕಾರ, ಕಿಟ್ಟ ಮತ್ತು ದೂರುದಾರ ಯುವತಿ ಪ್ರೌಢಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಶಾಲಾ ದಿನಗಳ ನಂತರವೂ ಇಬ್ಬರ ನಡುವೆ ಸಂಬಂಧ ಮುಂದುವರಿದಿತ್ತು ಎನ್ನಲಾಗಿದೆ. ಪ್ರಸ್ತುತ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ವ್ಯಾಸಂಗ ಮಾಡುತ್ತಿರುವ ಯುವತಿ, 2024ರ ಅಕ್ಟೋಬರ್ 11 ರಂದು ಗೆಳೆಯ ಕಿಟ್ಟ ತನ್ನ ಮನೆಗೆ ಯಾರೂ ಇಲ್ಲದ ಸಮಯದಲ್ಲಿ ಕರೆದು, ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ಉಲ್ಲೇಖಿಸಲಾಗಿದೆ.
ನಂತರ, 2025ರ ಜನವರಿಯಲ್ಲಿ, ಆತ ಮತ್ತೆ ತನ್ನ ಮೇಲೆ ಬಲವಂತ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಸ್ವಲ್ಪ ಸಮಯದ ನಂತರ ಯುವತಿ ತಾನು ಗರ್ಭಿಣಿ ಎಂದು ಅರಿತುಕೊಂಡಳು. ವಿಷಯ ತಿಳಿಸಿದಾಗ, ಆರೋಪಿ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ ಎನ್ನಲಾಗಿದೆ.
