CRIME NEWS

ಜೈಲ್ ನಲ್ಲಿ ದೊಡ್ಡ ಕೈದಿಗಳಿಂದ ಸಣ್ಣ ಕೈದಿಯ ಶೋಷಣೆ! ಹಲ್ಲೆ! ವಸೂಲಿ!: ನಾಲ್ವರ ವಿರುದ್ಧ ಕೋಕಾ

Share
  • ಜೈಲ್ನಲ್ಲಿ ಕೈದಿಗಳಿಂದಲೇ ಹಫ್ತಾ ವಸೂಲಿ: ನಾಲ್ವರು ಕ್ರಿಮಿನಲ್ ಗಳ ವಿರುದ್ಧ ಕೇಸ್

ಮಂಗಳೂರು:  ಜೈಲಿನಲ್ಲಿ ವಿಚಾರಣಾಧೀನ ಕೈದಿಗೆ ಹಲ್ಲೆ ನಡೆಸಿ, ಹಪ್ತ ವಸೂಲಿ ನಡೆಸಿದ ನಾಲ್ವರು ಸಹ ಕೈದಿಗಳ ವಿರುದ್ಧ ಕೆ-ಕೋಕಾ (Karnataka control of organised crime act ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

 

ಮಂಗಳೂರಿನ ಜೈಲಿನಲ್ಲಿರುವ ಆರೋಪಿ ಮಿಥುನ್ ಎಂಬಾತನಿಗೆ ಸಹ ಕೈದಿಗಳಾದ ಧನು ಯಾನೆ ಧನುಷ್ ಭಂಡಾರಿ, ಸಚಿನ್ ತಲಪಾಡಿ, ದಿಲೇಶ್ ಬಂಗೇರ ಯಾನೆ ದಿಲ್ಲು, ಲಾಯಿ ವೇಗಸ್ ಎಂಬವರು ಜು.9ರಂದು ಸಂಜೆ 5 ಗಂಟೆಗೆ ತೀವ್ರವಾಗಿ ಹಲ್ಲೆ ನಡೆಸಿದ್ದರು.

ಅಲ್ಲದೆ 50 ಸಾವಿರ ರೂ. ಹಪ್ತಾ ನೀಡುವಂತೆ ಬೆದರಿಸಿದ್ದರು. ಈ ವಿಚಾರ ಜೈಲು ಅಧಿಕಾರಿಗಳಿಗೆ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು.

ಮಿಥುನ್ ಪ್ರಾಣಭಯದಿಂದ ದೂರು ನೀಡುವ ಬದಲು ನಾಲ್ವರು ರೌಡಿಸಂ ಕೈದಿಗಳು ಹೇಳಿದಂತೆ ಹಣ ನೀಡಲು ಒಪ್ಪಿದ್ದ.  ಕೈದಿ ಸಚಿನ್ ಎಂಬಾತ ಕೊಟ್ಟ ಎರಡು ಮೊಬೈಲ್ ಸಂಖ್ಯೆಗೆ ತನ್ನ ಪತ್ನಿಯ ಮೂಲಕ 20 ಸಾವಿರ ರೂ. ಫೋನ್ ಪೇ ಮಾಡಿಸಿದ್ದ.

ಜು.12ರಂದು ಮಂಗಳೂರು ಸೆಂಟ್ರಲ್ ಡಿಸಿಪಿ,  ಬರ್ಕೆ ಪೊಲೀಸ್  ಇನ್ಸ್ಪೆಕ್ಟರ್ ಜೈಲಿನ ತಪಾಸಣೆ ಮಾಡಲು ಹೋಗಿದ್ದ ವೇಳೆ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲಾ ಜೈಲ್ ಸೂಪರಿಂಡೆಂಟ್ ಶರಣಬಸಪ್ಪ ಬರ್ಕೆ ಠಾಣೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಕೈದಿಗೆ ಜೈಲಿನಲ್ಲಿ  ಹಲ್ಲೆ ನಡೆಸಿದ್ದ ಸಹಕೈದಿಗಳ ವಿರುದ್ಧ ಕೆ-ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಈಗಾಗಲೆ ಆರೋಪಿಗಳು ಒಂದಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.  ಕೆ-ಕೋಕಾ ಕಾಯ್ದೆಯಡಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿ 5 ವರ್ಷದ ಶಿಕ್ಷೆ ವಿಧಿಸಬಹುದಾಗಿದೆ. ಅದನ್ನು ಜೀವಾವಧಿ ಶಿಕ್ಷೆಯವರಿಗೆ ವಿಸ್ತರಿಸಬಹುದಾಗಿದೆ.

ಆರೋಪಿಗಳ ಕೃತ್ಯದಿಂದ ಸಾವು ಸಂಭವಿಸಿದರೆ ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆ ವಿಧಿಸಬಹುದಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

 

To Top