ಬಂಟ್ವಾಳ: ಪ್ರಸಿದ್ಧ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ (60) ಭಾನುವಾರ ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.
ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಸಿದ್ಧಕಟ್ಟೆಯಲ್ಲಿ ಬಾಬು ಶೆಟ್ಟಿಗಾರ್ ಮತ್ತು ಗಿರಿಯಮ್ಮ ದಂಪತಿಯ ಪುತ್ರ.
ಬಣ್ಣದ ವೇಷದ ಜೊತೆ ನಾಟಕೀಯ ರಾಕ್ಷಸ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಸಿದ್ಧಕಟ್ಟೆ ಶೆಟ್ಟಿಗಾರ್ ಅವರು ವರ್ತಮಾನ ಕಾಲದಲ್ಲಿ ಅವರ ರಾಕ್ಷಸ ಪಾತ್ರಗಳಿಗೆ ಸರಿಸಾಟಿಯೇ ಇರಲಿಲ್ಲ.
ಯಕ್ಷಗಾನ ಕ್ಷೇತ್ರದಲ್ಲಿ 40ಕ್ಕೂ ಹೆಚ್ಚಿನ ವರ್ಷಗಳ ಕಾಲ ವ್ಯವಸಾಯ ಮಾಡಿರುವ ಸದಾಶಿವ ಶೆಟ್ಟಿಗಾರ್ ಅವರು ಪತ್ನಿ, ಮೂವರು ಮಕ್ಕಳು (ಎರಡು ಗಂಡು ಮತ್ತು 1 ಹೆಣ್ಣು) ಮಕ್ಕಳನ್ನು ಅಗಲಿದ್ದಾರೆ..
ಸಿದ್ಧಕಟ್ಟೆ ಸೈಂಟ್ ಮೆಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. 6ನೇ ತರಗತಿಯ ವರೆಗೆ ಶಾಲೆಗೆ ಹೋಗಿ ಬಳಿಕ ಯಕ್ಷಗಾನವೇ ಕಲಾ ಶಾಲೆಯ ಆಯಿತು.
ರೆಂಜಾಳ ರಾಮಕೃಷ್ಣ ರಾವ್ , ಬಣ್ಣದ ಮಹಾಲಿಂಗ ಅವರ ಬಳಿ ವೇಷ, ನಾಟ್ಯ ಮತ್ತು ರಂಗದ ನಡೆಗಳ ಕಲಿತು, ಇರಾ ಗೋಪಾಲಕೃಷ್ಣ ಭಾಗವತ, ಸುಣ್ಣಂಬಳ ವಿಶ್ವೇಶ್ವರ ಭಟ್, ಬೆಳ್ಳಾರೆ ಮಂಜುನಾಥ ಭಟ್ ಮತ್ತು ಹಿರಿಯ ಕಲಾವಿದರಿಂದ ಅನುಭವ ಸಿದ್ದಿಸಿಕೊಂಡರು.
ಕಟೀಲು ಮೇಳದಲ್ಲಿ 8 ವರ್ಷಗಳ ಕಾಲ ಬಣ್ಣದ ವೇಷಧಾರಿಯಾಗಿ ತಿರುಗಾಟ. ಬಳಿಕ 13 ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ಜನುಮನ ಗೆದ್ದು, 18 ವರ್ಷಗಳ ಕಾಲ ಹೊಸನಗರ, ಎಡನೀರು ಮತ್ತು ಹನುಮಗಿರಿ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ.
ಸತೀಶ ನೈನಾಡು, ಶಬರೀಶ ಮಾನ್ಯ, ಮನೀಷ್ ಪಾಟಾಳಿ, ಮಧುರಾಜ್ ಪಾಟಾಳಿ, ಸುಬ್ರಹ್ಮಣ್ಯ ಭಟ್ ಬದಿಯಡ್ಕ, ಸಚಿನ್ ಪಾಟಾಳಿ, ಶ್ರೀಶ ಮಣಿಲ, ರಂಜಿತ್ ಗೋಳಿಯಡ್ಕ ಮೊದಲಾದವರಿಗೆ ಸದಾಶಿವ ಶೆಟ್ಟಿಗಾರರ ಗರಡಿಯಲ್ಲಿ ಪಳಗಿದವರು.
ಇತ್ತೀಚೆಗೆ ಮಂಗಳೂರು ವಿವಿಯಿಂದ ಯಕ್ಷಮಂಗಳ ಪ್ರಶಸ್ತಿ ಸ್ವೀಕರಿಸಿದ್ದ ಅವರಿಗೆ ಹಲವು ಪ್ರಶಸ್ತಿ, ಸನ್ಮಾನಗಳು ಸಂದಿವೆ. ಭ್ರಾಮರಿ ಯಕ್ಷಮಣಿ ಪ್ರಶಸ್ತಿ,ಪೇಜಾವರ ಶ್ರೀಗಳ ಜನುಮದಿನದ ಶ್ರೀರಾಮ ವಿಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಹರೇಕಳ ಪಾವೂರು, ಬಿ. ಸಿ. ರೋಡಿನಲ್ಲಿ ಅಲ್ಲದೆ ಇನ್ನೂ ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.
