DAKSHINA KANNADA

ಪಾತಾಳ ವೆಂಕಟರಮಣ ಭಟ್ ಸ್ವರ್ಗಸ್ಥ: ಉಭಯ ತಿಟ್ಟುಗಳ ಮೇರು ಕಲಾವಿದ

Share

ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾತಾಳ ವೆಂಕಟರಮಣ ಭಟ್ (92) ಉಪ್ಪಿನಂಗಡಿಯ ತಮ್ಮ ಸ್ವ ಗೃಹದಲ್ಲಿ ಶನಿವಾರ ಹೃದಯಾಘಾತದಿಂದ ನಿಧನರಾದರು.

ಪಾತಾಳ ವೆಂಕಟರಮಣ ಭಟ್ಟರ ಸ್ತ್ರೀ ವೇಷ

ತೆಂಕು ಮತ್ತು ಬಡಗು ಎರಡೂ ತಿಟ್ಟುಗಳಲ್ಲಿ ಅಗ್ರಮಾನ್ಯ ವೇಷಗಳನ್ನು ಮಾಡಿ ಭಾವಾಭಿವ್ಯಕ್ತಿ ಮತ್ತು ನೃತ್ಯ ಲಾಲಿತ್ಯಗಳಿಂದ ಯಕ್ಷಗಾನ ರಂಗದಲ್ಲಿ ಪ್ರಸಿದ್ಧಿ ಪಡೆದಿದ್ದರುಪುತ್ತೂರು ಕೃಷ್ಣಭಟ್ಟರಿಂದ ತೆಂಕುತಿಟ್ಟಿನ ಅಭ್ಯಾಸ ಮಾಡಿದ್ದರು.

ಬಳಿಕ ಮೂಲ್ಕಿ ಮೇಳ, ಸುರತ್ಕಲ್ ಮೇಳ, ಸೌಕೂರು ಮೇಳ, ಧರ್ಮಸ್ಥಳದ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಗಳಲ್ಲಿ ತಿರುಗಾಟ ನಡೆಸಿದ್ದರು. ರಂಭೆ, ಊರ್ವಶಿ, ಮೇನಕೆ, ಸತ್ಯಭಾಮೆ, ಸುಭದ್ರೆ, ದೌಪದಿ, ಮೀನಾಕ್ಷಿ, ಸ್ವಯಂಪ್ರಭೆಯಂತಹ ಪಾತ್ರಗಳಿಗೆ ತನ್ನದೇ ಆದ ಮೆರುಗು ನೀಡಿದ್ದರು.

ಪಾತಾಳರು ಬೇಲೂರಿನ ಶಿಲಾ ಬಾಲಿಕೆಯರ ಅಂಗಭಂಗಿಗಳನ್ನು ಬೇಲೂರಿಗೆ ಹೋಗಿ ಸ್ವತಃ ಅಭ್ಯಸಿಸಿ ಯಕ್ಷಗಾನದಲ್ಲಿ ಅಳವಡಿಸಿದವರು.
ಪುತ್ತೂರಿನ ಸಮೀಪದ ಬೈಪದವು ಎಂಬಲ್ಲಿ ರಾಮ ಭಟ್ಟ. ಹೇಮಾವತಿ ದಂಪತಿಗೆ1933 ನವಂಬರ್ 16ರಂದು ಜನಿಸಿದ ವೆಂಕಟರಮಣ ಭಟ್ ಅವರು,1960 ರಲ್ಲಿ ಪರಮೇಶ್ವರಿ ಅವರನ್ನು ಮದುವೆಯಾದರು.

ಪಾತಾಳ ವೆಂಕಟರಮಣ ಭಟ್ಟರು

ಕಾಂಚನ ಮೇಳದಿಂದ ಸೌಕೂರು ಮೇಳವನ್ನು ಸೇರಿದ ಪಾತಾಳ ವೆಂಕಟ್ರಮಣ ಭಟ್ಟರಿಗೆ ಬಡಗುತಿಟ್ಟಿನ ನಂಟು ಬೆಳೆಯಿತು.
ಸೌಕೂರು ಮೇಳದ ಸ್ತ್ರೀ ವೇಷಧಾರಿ ಉಳ್ತೂರು ಸೀತಾರಾಮರವರಿಂದ ಬಡಗಿನ ನಾಟ್ಯದ ಹೆಜ್ಜೆಗಳನ್ನೂ ಕಲಿತರು.

ವಾಪಸ್ ತೆಂಕಿನ ಮೇಳಕ್ಕೆ ಬಂದಾಗ ಪೆರುವೋಡಿ ನಾರಾಯಣ ಭಟ್ಟರಿಂದ ನಾಟ್ಯಗಾರಿಕೆಯ ಕಲಿಕೆಯನ್ನು ಪೂರ್ಣಗೊಳಿಸಿದರು.


ಕಡಾರು ನಾರಾಯಣ ಭಟ್ ಹಾಗೂ ಅಳಿಕೆ ರಾಮಯ್ಯ ರೈಗಳಿಂದಲೂ ಹೆಚ್ಚಿನ ನಾಟ್ಯಾಭ್ಯಾಸ ಮಾಡಿದರು.
ಕಾಂಚನ ಮೇಳ, ಸೌಕೂರು ಮೇಳ, 1954ರಲ್ಲಿ ಮೂಲ್ಕಿ ಮೇಳಕ್ಕೆ, 1963ರಲ್ಲಿ ಧರ್ಮಸ್ಥಳ ಮೇಳಕ್ಕೆ ಸೇರಿದರು. ಧರ್ಮಸ್ಥಳ ಮೇಳದ ತಿರುಗಾಟವು ಪಾತಾಳ ವೆಂಕಟ್ರಮಣ ಭಟ್ಟರ ಕಲಾ ಜೀವನದ ಸುವರ್ಣಯುಗ.

ಇಬ್ಬರು ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳು, ಹಿರಿಯ ಮಗ ಅಂಬಾಪ್ರಸಾದ ಪಾತಾಳ ಯಕ್ಷರಂಗದ ಪ್ರಸಿದ್ಧ ಸ್ತ್ರೀ ವೇಷಧಾರಿ ಯಾಗಿ ಪ್ರಸಿದ್ಧರಾಗಿದ್ದಾರೆ.
ಪ್ರಶಸ್ತಿ ಪುರಸ್ಕಾರಗಳು ಹಲವು ಅದರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ, ವಿಟ್ಲ ಗೋಪಾಲಕೃಷ್ಣ ಭಟ್ ಪ್ರತಿಷ್ಟಾನ ಪ್ರಶಸ್ತಿ, ವಿದ್ಯಾಮಾನ್ಯ ಪ್ರಶಸ್ತಿ, ಯಕ್ಷ ಕಲಾನಿಧಿ ಪ್ರಶಸ್ತಿ, ಅಗರಿ ಪ್ರಶಸ್ತಿ, ಡೋಗ್ರಾ ಪೂಜಾರಿ ಪ್ರಶಸ್ತಿಗಳು ಸೇರಿವೆ.

 

To Top