ಮನೆ ತೆರಿಗೆ ಸೇರಿದಂತೆ ಯಾವುದೇ ಸರಕಾರಿ ಪಾವತಿಗಳನ್ನು ಬಹಳ ಬದ್ಧತೆ ಮತ್ತು ಪ್ರಾಮಾಣಿಕವಾಗಿ ಪಾವತಿಸುವ ದಕ್ಷಿಣ ಕನ್ನಡ ಜಿಲ್ಲೆಯ ಜನರ ಮನೋಭಾವನೆ ಶ್ಲಾಘನೀಯ ಎಂದು ಜಿಲ್ಲಾ ಪಂಚಾಯತ್ ನಿಕಟಪೂರ್ವ ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಮತ್ತು ವಿಜಾಪುರ ಜಿಲ್ಲಾಧಿಕಾರಿ ಡಾ ಕೆ ಆನಂದ್ ಹೇಳಿದ್ದಾರೆ.
ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ತನಗೆ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಮತ್ತು ನೂತನ ಸಿ ಇ ಓ ಅವರಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ತೆರಿಗೆ ಸಂಗ್ರಹದಲ್ಲಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಸರಕಾರಿ ನೌಕರರಿಗೆ ಉತ್ತಮವಾಗಿ ಕೆಲಸ ಮಾಡುವ ವಾತಾವರಣ ಇದೆ. ಹಲವು ಇಲಾಖೆಗಳಲ್ಲಿ ಸಾಕಷ್ಟು ಸಿಬ್ಬಂದಿಗಳ ಕೊರತೆಯ ಮಧ್ಯೆಯೂ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಸರಕಾರಿ ಕಚೇರಿಗೆ ಬರುವ ಸಾರ್ವಜನಿಕರ ಕೆಲಸವನ್ನು ತ್ವರಿತವಾಗಿ ಮಾಡಿಕೊಡುವುದು ಮತ್ತು ಅವರಿಗೆ ನಿಯಮದ ಬಗ್ಗೆ ಸರಳವಾಗಿ ತಿಳಿಸಿಕೊಡುವುದು ಸರಕಾರಿ ನೌಕರರ ಆದ್ಯತೆಯಾಗಬೇಕು ಎಂದು ಡಾ ಆನಂದ್ ತಿಳಿಸಿದರು.
ಜಿ ಪಂ ನೂತನ ಮುಖ್ಯ ಕಾರ್ಯನಿರ್ವಾಹಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ ಅವರು ಎಲ್ಲರ ಸಹಕಾರ ಕೋರಿದರು.
ಜಿಲ್ಲಾಧಿಕಾರಿ ದರ್ಶನ್ ಎಚ್ ವಿ, ಪೊಲೀಸ್ ವರಿಷ್ಟಧಿಕಾರಿ ಡಾ ಆರುಣ್ ಕೆ ಅವರು ನಿರ್ಗಮಿತ ಸಿ ಇ ಓ ಅವರ ಕಾರ್ಯಶೈಲಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಡಿ ಸಿ ಪಿ ಮಿಥುನ್ ಎಚ್ ಎನ್ , ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ಪಿಲಿಕುಳ ಆಯುಕ್ತ ಡಾ ಆರುಣ್ ಕುಮಾರ್ ಶೆಟ್ಟಿ, ಜಿಲ್ಲಾ ಅರೋಗ್ಯಧಿಕಾರಿ ಡಾ ತಿಮ್ಮಯ್ಯ, ಲೇಡಿಘೋಷನ್ ಅಧೀಕ್ಷಕ ಡಾ ದುರ್ಗಾಕುಮಾರ್, ಜಿ ಪಂ ಯೋಜನಾ ನಿರ್ದೇಶಕ ಜಯರಾಮ್, ಆಯುಷ್ ಅಧಿಕಾರಿ ಡಾ ಮುಹಮ್ಮದ್ ಇಕ್ಬಾಲ್ ಮತ್ತಿತರರು ಶುಭಾಂಶನೆಗೈದರು.
ಜಿ ಪಂ ಯೋಜನಾಧಿಕಾರಿ ಸಂಧ್ಯಾ ಸ್ವಾಗತಿಸಿ, ಸಹಾಯಕ ನಿರ್ದೇಶಕ ಮಹೇಶ್ ನಿರೂಪಿಸಿದರು. ಶಕುಂತಲಾ ವಂದಿಸಿದರು.