ವಕೀಲರ ಉಪಸ್ಥಿತಿಯಲ್ಲಿ ಹೇಳಿಕೆ ದಾಖಲಿಸಲು ಕೋರ್ಟ್ ನಕಾರ
ಮಂಗಳೂರು : ಧರ್ಮಸ್ಥಳದಲ್ಲಿ ಹಲವಾರು ಶವಗಳನ್ನು ಸಾಮೂಹಿಕವಾಗಿ ಹೂತು ಹಾಕಿದ ಆರೋಪ ಮಾಡಿರುವ ದೂರುದಾರರನ್ನು ಜು.11ರಂದು ಬೆಳ್ತಂಗಡಿ ತಾಲ್ಲೂಕಿನ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ವಕೀಲರ ಉಪಸ್ಥಿತಿಯಲ್ಲಿ ಹೇಳಿಕೆ ದಾಖಲಿಸಲು ನ್ಯಾಯಾಲಯ ನಿರಾಕರಿಸಿತು ಎಂದು ದೂರುದಾರನ ಪರ ವಕೀಲರು ಹೇಳಿಕೆ ನೀಡಿದ್ದಾರೆ.

- ಧರ್ಮಸ್ಥಳದಲ್ಲಿ ಅನೇಕ ಹೆಣಗಳನ್ನು ಹೂತಿದ್ದೇನೆ ಎಂದು ಹೇಳಿಕೊಂಡ ವ್ಯಕ್ತಿ ಬೆಳ್ತಂಗಡಿ ಕೋರ್ಟಿಗೆ ವಕೀಲರ ಜೊತೆ ಹಾಜರಾಗಿದ್ದಾನೆ
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ವಕೀಲರಾದ ಓಜಸ್ವಿ ಗೌಡ ಹಾಗು ಸಚಿನ್ ದೇಶಪಾಂಡೆ, ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಸಾಮೂಹಿಕವಾಗಿ ಹೂತು ಹಾಕಿದ ಪ್ರಕರಣದ ದೂರುದಾರರಿಗೆ ಸೂಕ್ತ ರಕ್ಷಣೆ ನೀಡಲಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಜುಲೈ 10, 2025 ರ ಸಂಜೆ ನಮಗೆ ಸಂದೇಶ ಕಳುಹಿಸಿದ್ದರು. ದೂರುದಾರರು, ರಕ್ಷಣೆ ನೀಡುವಂತೆ ನೀಡಿದ್ದ ಕೋರಿಕೆಗೆ ತ್ವರಿತವಾಗಿ ಸೂಕ್ತ ಕ್ರಮ ಕೈಗೊಂಡದ್ದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ, ದಕ್ಷಿಣ ಕನ್ನಡದ ಪೊಲೀಸ್ ಅಧಿಕಾರಿಗಳಿಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ದೂರುದಾರರು ತಮ್ಮ ಕೃತಜ್ಞತೆಯನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಬಿಎನ್‌ಎಸ್‌ಎಸ್‌ನ ಸೆಕ್ಷನ್ 183 (ಸಿಆರ್‌ಪಿಸಿಯ ಸೆಕ್ಷನ್ 164) ಅಡಿಯಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಲು ದೂರುದಾರರನ್ನು ನ್ಯಾಯಾಲಯವನ್ನು ಕರೆದೊಯ್ಯಲಾಯಿತು. ದೂರುದಾರ ತಾನು ಅನಕ್ಷರಸ್ಥ ಮತ್ತು ನ್ಯಾಯಾಲಯಕ್ಕೆ ಇದುವರೆಗೆ ಹೋಗಿರದಿದ್ದುದರಿಂದ ತನಗೆ ತೊಂದರೆಯಾಗಬಹುದು ಎಂದು ಹೇಳಿಕೆ ನೀಡುವಾಗ ನಮ್ಮಲ್ಲಿ ಒಬ್ಬರು ವಕೀಲರು ನ್ಯಾಯಾಲಯದಲ್ಲಿ ತನ್ನ ಜೊತೆ ಹಾಜರಿರಬೇಕು ಎಂದು ಸೂಚಿಸಿದ್ದರು.
ಈ ಕುರಿತು ನಾವು ನ್ಯಾಯಾಲಯದ ಗಮನಕ್ಕೆ ತಂದಿದ್ದೆವು. ಆದರೆ, ದೂರುದಾರರ ಜೊತೆ ವಕೀಲರು ಹಾಜರಿರುವುದಕ್ಕೆ ನ್ಯಾಯಾಲಯವು ಒಪ್ಪಲಿಲ್ಲ. ನಮ್ಮ ಅನುಪಸ್ಥಿತಿಯಲ್ಲಿ ದೂರುದಾರನ ಹೇಳಿಕೆಗಳ ರೆಕಾರ್ಡಿಂಗ್ ಅನ್ನು ಪ್ರಾರಂಭಿಸಿತು ಎಂದು ದೂರುದಾರನ ಪರ ವಕೀಲರು ತಿಳಿಸಿದ್ದಾರೆ.
ಸುಮಾರು 1 ಗಂಟೆ 20 ನಿಮಿಷ ದೂರದಾರ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಕೋರ್ಟಿಂದ ಪೊಲೀಸ್ ಠಾಣೆಗೆ:
ಹೇಳಿಕೆ ನೀಡಲು ಬಂದ ವ್ಯಕ್ತಿಯನ್ನು ನ್ಯಾಯಾಲಯದಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆತಂದು ಠಾಣೆಯಲ್ಲಿ ಕಾನೂನು ಪ್ರಕ್ರಿಯೆ ನಡೆಸಲಾಗಿದೆ.
