ಪುತ್ತೂರು: ಪ್ರೀತಿಯ ನಾಟಕವಾಡಿ, ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಕೇಸಿಗೊಳಗಾಗಿ ತಲೆಮರೆಸಿಕೊಂಡಿದ್ದ ಕೃಷ್ಣಾ ಜೆ. ರಾವ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪರಾರಿಯಾಗಲು ಸಹಕರಿಸಿದ ಆರೋಪದ ಮೇಲೆ ಆತನ ತಂದೆ ಪುತ್ತೂರಿನ ಪ್ರಭಾವಿ ಬಿಜೆಪಿ ಮುಖಂಡ ಹಾಗೂ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್ (53) ಅವರನ್ನು ಪೊಲೀಸರು ಬಂಧಿಸಿದ್ದರು. ವೈದಕೀಯ ಪರೀಕ್ಷೆಯ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಲೇ ಪಿ.ಜಿ. ಜಗನ್ನಿವಾಸ ರಾವ್ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಹಿನ್ನೆಲೆ:
ಪುತ್ತೂರಿನ ಕೃಷ್ಣಾ ಜೆ. ರಾವ್ ತನ್ನ ಹೈಸ್ಕೂಲ್ ಸಹಪಾಠಿಯನ್ನೇ ಪ್ರೀತಿಸಿ, ವಿವಾಹದ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿದ್ದ. ಬಳಿಕ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ, ಸಂತ್ರಸ್ತ ಯುವತಿ ಜೂ.24 ರಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
