ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅ.ಕ್ರ: 39/2025 ಪ್ರಕರಣಕ್ಕೆ ಸಂಬಂಧಿಸಿದಂತೆ, ದೂರುದಾರರ ವಕೀಲರು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿರುವ ‘ಕಳೇಬರ’ದ ಕುರಿತು ಪೊಲೀಸರು ಸ್ಪಷ್ಟನೆಯನ್ನು ನೀಡಿದ್ದಾರೆ.
ಈ ದೂರಿಗೆ ಸಂಬಂಧಿಸಿದಂತೆ, ಈವರೆಗೂ ಪೊಲೀಸ್ ಠಾಣೆಗೆ ತಲೆಬುರುಡೆ ಮತ್ತು ಅವಶೇಷಗಳ ಕೆಲಭಾಗಗಳಿರುವ ಎರಡು ಫೋಟೋಗಳ ಕಲರ್ ಝೆರಾಕ್ಸ್ ಪ್ರತಿಗಳನ್ನು ಮಾತ್ರ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನು ಹೊರತುಪಡಿಸಿ, ಯಾವುದೇ ಕಳೇಬರವನ್ನು ಈವರೆಗೆ ಪೊಲೀಸ್ ಠಾಣೆಗೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೂರುದಾರರ ಪರವಾಗಿ ವಕೀಲರು ದೂರು ಸಲ್ಲಿಸುವಾಗ, ಕಳೇಬರವನ್ನು ಮುಂದಿನ ಹಂತದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಲಿಖಿತವಾಗಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಮೂಲಕ, ‘ಕಳೇಬರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೂಡಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ.
