DAKSHINA KANNADA

ಅಷ್ಟಮಿ ಚೌತಿ ಮೊಹರಂ ಹಬ್ಬಗಳ ಸರಣಿ: ಆಯೋಜಕರಿಗೆ ಷರತ್ತಿನ ಮೇಲೆ ಷರತ್ತು

Share
  1. ಮಂಗಳೂರು: ನಾಡಿನ ವಿವಿಧ ಸಮುದಾಯಗಳ ಜನರು ಆಚರಿಸುವ ಹಬ್ಬಗಳ ಹಿನ್ನೆಲೆಯಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮ ಮತ್ತು ಮೆರವಣಿಗೆಗಳಿಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಇಲಾಖೆಯು ಷರತ್ತುಗಳನ್ನು ವಿಧಿಸಿದೆ. ಷರತ್ತು ಉಲ್ಲಂಘಿಸಿ ಕಾರ್ಯಕ್ರಮ ಆಯೋಜಿಸಿದರೆ, ಮೆರವಣಿಗೆ ನಡೆಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದೆ.

ಮುಂದಿನ ದಿನಗಳಲ್ಲಿ ಮುಹರ‌್ರಂ, ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ, ಗಣೇಶ ಚತುರ್ಥಿ, ಮಿಲಾದುನ್ನಬಿ ಮತ್ತಿತರ ಹಬ್ಬಗಳು ನಡೆಯಲಿವೆ. ಸಾರ್ವಜನಿಕ ಹಿತಾಸಕ್ತಿ, ಸುರಕ್ಷತೆ ಮತ್ತು ಕಾನೂನು ಪಾಲನೆಯ ದೃಷ್ಠಿಯಿಂದ ಕೆಲವು ಷರತ್ತುಗಳನ್ನು ಪಾಲಿಸಲು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸೂಚಿಸಿದ್ದಾರೆ.

*ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವ ಆಯೋಜಕರು ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರತಿ ಹಬ್ಬದ ಮುಂಚಿತವಾಗಿ ನಿಖರವಾದ ಮಾರ್ಗಸೂಚಿಗಳನ್ನು (ರಸ್ತೆ, ಸಮಯ, ಧ್ವನಿ ನಿಯಂತ್ರಣ) ಹೊರಡಿಸಲಾಗುತ್ತದೆ. ಷರತ್ತುಗಳ ಪಾಲನೆಗಾಗಿ ಆಯೋಜಕರು ತಮ್ಮ ಪ್ರತಿನಿಧಿಗಳ ಹೆಸರು ಮತ್ತು ಸಂಪರ್ಕ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಈ ವಿವರ ನೀಡದಿರುವ ಆಯೋಜಕರಿಗೆ ಕಾರ್ಯ ಕ್ರಮಗಳಿಗೆ ಅನುಮತಿ ನೀಡಲಾಗುವುದಿಲ್ಲ. ಯಾವುದೇ ಷರತ್ತುಗಳ ಉಲ್ಲಂಘನೆ ಅಥವಾ ಘಟನೆಯ ಹೊಣೆಗಾರಿಕೆ ಈ ನಿಯೋಜಿತ ವ್ಯಕ್ತಿಗಳ ಮೇಲೆ ಇರಲಿದೆ ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಪೊಲೀಸ್ ಹಾಗೂ ಸಂಬಂಧಿತ ಇತರ ಇಲಾಖೆಗಳ ಲಿಖಿತ ಅನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮ ಅಥವಾ ಮೆರವಣಿಗೆ ನಡೆಸಬಾರದು. ಯಾವುದೇ ಕಾರಣಕ್ಕೂ ರಾತ್ರಿ 11:30ರ ಬಳಿಕ ಮೆರವಣಿಗೆ ನಡೆಸಬಾರದು. ನಿಗದಿತ ಸಮಯದ ನಂತರ ನಡೆಯುವ ಯಾವುದೇ ಸಮಾವೇಶವನ್ನು ಕಾನೂನುಬಾಹಿರ ಸಮಾವೇಶವೆಂದು ಪರಿಗಣಿಸಲಾಗುವುದು. ಖಾಸಗಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸುವುದಕ್ಕೆ ಆ ಸ್ಥಳದ ಮಾಲಕರಿಂದ ನಿರಾಕ್ಷೇಪಣಾ ಪತ್ರ ಪಡೆದು ಹಾಜರುಪಡಿಸಬೇಕು. ಅನುಮೋದಿತ ಸ್ಥಳ ಅಥವಾ ಮಾರ್ಗದಲ್ಲೇ ಕಾರ್ಯಕ್ರಮ ನಡೆಸಬೇಕು.

*ಡಿ.ಜೆ, ಜೋರಾದ ಸ್ಪೀಕರ್ ಅಥವಾ ಈ ರೀತಿಯ ಯಾವುದೇ ಧ್ವನಿವರ್ಧಕ ಉಪಕರಣಗಳ ಬಳಕೆ ಸಂಪೂರ್ಣ ನಿಷೇಧವಾಗಿದೆ. ಧ್ವನಿವರ್ಧಕ ಬಳಕೆಗೆ ಮುಂಚಿತವಾಗಿ ಅನುಮತಿ ಪಡೆಯಬೇಕು. ರಾತ್ರಿ 10 ಗಂಟೆಗೆ ಅವುಗಳನ್ನು ಸ್ಥಗಿತಗೊಳಿಸಬೇಕು. ಶಬ್ದ ಮಟ್ಟಗಳು ವಾಣಿಜ್ಯ ಪ್ರದೇಶ – 65 ಡೆಸಿಬಲ್, ವಾಸಸ್ಥಳ – 55 ಡೆಸಿಬಲ್, ನಿಶ್ಯಬ್ದ ವಲಯ – 50 ಡೆಸಿಬಲ್ ಮಿತಿಯಲ್ಲಿರಬೇಕು.

* ಆಯೋಜಕರು ಸ್ಥಳದಲ್ಲಿ 24/7 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಸಿಸಿಟಿವಿ ಕ್ಯಾಮರಾ ಗಳನ್ನು ಅಳವಡಿಸಬೇಕು ಹಾಗೂ 30 ದಿನಗಳ ಕಾಲ ದೃಶ್ಯಾವಳಿ ಸಂಗ್ರಹಿಸಬೇಕು.

*ಘೋಷಣೆಗಳು, ಭಿತ್ತಿಪತ್ರಗಳು, ಪ್ರದರ್ಶನಗಳು ಅಥವಾ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ವಿಷಯಗಳು ಯಾವುದೇ ಧರ್ಮದ ವಿರೋಧ ಅಥವಾ ದ್ವೇಷವನ್ನು ಉಂಟುಮಾಡುವ ರೀತಿಯಲ್ಲಿರಬಾರದು.

*ಜನಸಂದಣಿಗೆ ಕಡ್ಡಾಯ ಸ್ವಯಂಸೇವಕರ ನೇಮಕಾತಿ ಮಾಡಬೇಕು. ಸಾಮರ್ಥ್ಯ ಮೀರದಂತೆ ಜನಸಮೂಹ ನಿಯಂತ್ರಿಸಬೇಕು.

*ಪೆಂಡಾಲು ಕಾರ್ಯಕ್ರಮದಲ್ಲಿ ಬಳಸುವ ವಾಹನ ಮತ್ತಿತ್ಯಾದಿಗಳ ಎತ್ತರಗಳ ಕಾನೂನು ಅಥವಾ ಮೆಸ್ಕಾಂ ಮಾನದಂಡಗಳನ್ನು ಮೀರುವಂತಿರಬಾರದು. ವಾಹನಗಳು ನೋಂದಣಿ ಪತ್ರ, ದೃಢತೆ ಪ್ರಮಾಣಪತ್ರ, ವಿಮೆ ಮತ್ತು ಪ್ರಮಾಣ ಪತ್ರ ಹೊಂದಿರಬೇಕು.

*ಅಗ್ನಿನಂದಕಗಳು, ಆಂಬುಲೆನ್ಸ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಟ್ಟುಕೊಳ್ಳುವುದು ಕಡ್ಡಾಯವಾಗಿವೆ. ಬೆಂಕಿಯ ಮೂಲಗಳ ಬಳಿಯಲ್ಲಿ ಸುಲಭವಾಗಿ ಹೊತ್ತಿಕೊಳ್ಳುವ ವಸ್ತುಗಳನ್ನು ಇರಿಸಬಾರದು. ವಿಷಕಾರಿ ಬಣ್ಣಗಳು, ನಿಷೇಧಿತ ರಾಸಾಯನಿಕಗಳು, ಏಕ ಬಳಕೆ ಪ್ಲಾಸ್ಟಿಕ್ ನಿಷೇದಿಸಿದೆ.

*ವಾಹನ ಮತ್ತು ಪಾದಚಾರಿ ಸಂಚಾರಕ್ಕೆ ಯಾವುದೇ ತಡೆ ಇಲ್ಲದಂತೆ ವ್ಯವಸ್ಥೆ ಮಾಡಬೇಕು. ತುರ್ತು ಮಾರ್ಗಗಳಿಗೆ ತಡೆಯನ್ನುಂಟು ಮಾಡಬಾರದು. ನಿಗದಿತ ಸ್ಥಳದಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಇರಬೇಕು.

*ಸಾರ್ವಜನಿಕ/ಖಾಸಗಿ ಆಸ್ತಿಗೆ ಹಾನಿ ಮಾಡಬಾರದು, ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿಯುಂಟು ಮಾಡಬಾರದು.

*ಕಾರ್ಯಕ್ರಮದ ಪೂರ್ಣ ವಿವರಗಳನ್ನು ಮುಂಚಿತವಾಗಿ ನೀಡಬೇಕು. ಅನುಮತಿ ಪತ್ರದಲ್ಲಿ ನೀಡಿದ ಸಮಯವನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲಾ ಪೊಲೀಸ್ ಸೂಚನೆಗಳನ್ನು ಪಾಲಿಸಬೇಕು.

*ಕಾರ್ಯಕ್ರಮದ ವೇಳೆ ಮಹಿಳೆಯರ ಚುಡಾವಣೆ, ಹಿಂಬಾಲಿಸುವಿಕೆ, ಲೈಂಗಿಕ ಕಿರುಕುಳ ಮುಂತಾದ ಅಪರಾಧಗಳು ನಡೆಯದಂತೆ ನೋಡಿಕೊಳ್ಳಬೇಕು.

* ಯಾವುದೇ ಬ್ಯಾನರ್ ಅಥವಾ ಪ್ಲೆಕ್ಸ್ ಅನ್ನು ಸಂಬಂಧಿತ ಪ್ರಾಧಿಕಾರದಿಂದ ಮುಂಚಿತವಾಗಿ ಅನುಮತಿ ಇಲ್ಲದೆ ಹಾಕಬಾರದು. ಕಾರ್ಯಕ್ರಮ ಮುಗಿದ ತಕ್ಷಣ ಅವುಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಬೇಕು.

* ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರಾಸ್ತ್ರ, ಹರಿತವಾದ ಆಯುಧಗಳು ಇತ್ಯಾದಿ ಅಪಾಯ ಕಾರಿ ಆಯುಧಗಳ ಪ್ರದರ್ಶನ ಮತ್ತು ಸಾಗಾಟ ಮಾಡಬಾರದು.

*ಡ್ರೋನ್ ಬಳಸಲು ಮುಂಚಿತ ಅನುಮತಿ ಕಡ್ಡಾಯವಾಗಿದೆ. ಅನುಮತಿ ಇಲ್ಲದೆ ಯಾವುದೇ ಡ್ರೋನ್ ಅಥವಾ ಯುಎವಿ ಬಳಸುವುದು ನಿಷಿದ್ಧವಾಗಿದೆ.

*ಮೆರವಣಿಗೆ ಅಥವಾ ಪ್ರದರ್ಶನಗಳಲ್ಲಿ ಪ್ರಾಣಿಗಳನ್ನು ಬಳಸಲು ಮುಂಚಿತವಾಗಿ ಅನುಮತಿ ಪಡೆಯ ಬೇಕು ಮತ್ತು ಪ್ರಾಣಿ ಹಕ್ಕುಗಳ ನಿಯಮ ಪಾಲನೆ ಕಡ್ಡಾಯವಾಗಿದೆ.

*ಪೊಲೀಸರು ಅಥವಾ ಅಧಿಕೃತ ಅಧಿಕಾರಿಗಳು ಯಾವುದೇ ಸಮಯದಲ್ಲಿ ಸ್ಥಳವನ್ನು ತಪಾಸಣೆ ಮಾಡಬಹುದು. ಪೊಲೀಸ್ ಇಲಾಖೆಯ ಕರ್ತವ್ಯಕ್ಕೆ ಅಡ್ಡಿಪಡಿಸುವಂತಿಲ್ಲ.

* ಆಯೋಜಕರು ಮತ್ತು ಸಾರ್ವಜನಿಕರು ಯಾವುದೇ ಸಂಶಯಾಸ್ಪದ ಚಟುವಟಿಕೆ, ಸುಳ್ಳು ಮಾಹಿತಿ ಅಥವಾ ಗಲಭೆಗಳನ್ನು ಹತ್ತಿರದ ಪೊಲೀಸ್ ಠಾಣೆ ಅಥವಾ 112ಕ್ಕೆ ಕರೆಮಾಡಿ ತಿಳಿಸಬೇಕು.

ವಿಧಿಸಲಾದ ಯಾವುದೇ ಷರತ್ತುಗಳ ಉಲ್ಲಂಘನೆಯು ಭಾರತೀಯ ನ್ಯಾಯ ಸಂಹಿತೆ 2023, ಕರ್ನಾಟಕ ಪೊಲೀಸ್ ಕಾಯ್ದೆ 1963, ಪರಿಸರ ಸಂರಕ್ಷಣಾ ಕಾಯ್ದೆ 1986, ಮೋಟಾರು ವಾಹನ ಕಾಯ್ದೆ 1988, ಮಾಹಿತಿ ತಂತ್ರಜ್ಞಾನ ಕಾಯ್ದೆ 2000, ಶಸ್ತ್ರಾಸ್ತ್ರ ಕಾಯ್ದೆ 1959, ಡೋನ್ ನಿಯಮಗಳು 2021, ಸ್ಫೋಟಕಗಳ ಕಾಯ್ದೆ 1884 ಮತ್ತು ಇತರ ಸಂಬಂಧಿತ ಕಾನೂನುಗಳಡಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ ರೆಡ್ಡಿ ಎಚ್ಚರಿಸಿದ್ದಾರೆ.

Click to comment

Leave a Reply

Your email address will not be published. Required fields are marked *

To Top