ಕೆಮುಂಡೇಲು : ಮಾನವ ದೇಹದ ಅಮೂಲ್ಯ – ಅತ್ಯಗತ್ಯ “ಅಂಗಾಂಗಳ ಕಸಿ ಶಸ್ತ್ರಚಿಕಿತ್ಸೆ”ಯ ವಿಭಾಗದಲ್ಲಿ ಅಂತಾರಾಷ್ಟ್ರೀಯ ಶ್ರೇಷ್ಠತೆಯನ್ನು ಸುಮಾರು ನಾಲ್ನೂರು ಯಶಸ್ವಿ ಶಸ್ತ್ರಚಿಕಿತ್ಸೆಗಳ ಮೂಲಕ ಪ್ರಮಾಣಪಡಿಸಿದ ಡಾ.ಕೆ.ಜಿ.ಸುರೇಶ ರಾವ್ ಅವರಿಗೆ ಹುಟ್ಟೂರಿನಲ್ಲಿ ಅಭಿಮಾನ ಪೂರ್ವಕ ಗೌರವಾರ್ಪಣೆ ನೆರವೇರಿತು.
ಕೆಮುಂಡೇಲಿನ ಶ್ರೀ ಪಾಂಡುರಂಗ ಭಜನಾ ಮಂಡಳಿ,ಕೆಮುಂಡೇಲು ಅನುದಾನಿತ ಹಿ. ಪ್ರಾಥಮಿಕ ಶಾಲೆಹಾಗೂ ಹಳೆವಿದ್ಯಾರ್ಥಸಂಘ ಮತ್ತು ಕೆಮುಂಡೇಲು,ಉಳ್ಳೂರು ಗ್ರಾಮಸ್ಥರು ಈ ಕಾರ್ಯಕ್ರಮವನ್ನು ಕೆಮುಂಡೇಲು ಭಜನಾ ಮಂಡಳಿಯಲ್ಲಿ ಸಂಘಟಿಸಿದ್ದರು.
ಮಹತ್ತನ್ನು ಸಾಧಿಸುವ ಸಂಕಲ್ಪ ವ್ಯಕ್ತಿಜೀವನವನ್ನು ಸುಸಂಪನ್ನಗೊಳಿಸಿ ದೇಶದ ಆಸ್ತಿಯನ್ನಾಗಿಸಿ ಸಮಾಜದಲ್ಲಿ ಬಹುಮಾನ್ಯತೆಯನ್ನು ಪಡೆಯುವ ಎತ್ತರಕ್ಕೆ ಏರಿಸುತ್ತದೆ ಎಂಬುದಕ್ಕೆ ನಮ್ಮ ಸುರೇಶ ರಾವ್ ಪ್ರತ್ಯಕ್ಷ ಸಾಕ್ಷಿ, ಯುವ ಸಂದಣಿಗೆ ಇವರ ಜೀವನ ವಿಧಾನ ಒಂದು ಆದರ್ಶ – ಮಾರ್ಗದರ್ಶಿ ಎಂದು ಹುಟ್ಟೂರಿನ ಕುವರನನ್ನು ಶ್ಲಾಘಿಸಿ “ಅಭಿನವ ಧನ್ವಂತರಿ” ಉಪಾದಿಯನ್ನಿತ್ತು ಸಮ್ಮಾನಿಸಲಾಯಿತು.ಸುರೇಶ ರಾವ್ ಪತ್ನಿ ನೇತ್ರತಜ್ಞೆ ಡಾ.ಕಲ್ಪನಾ ಜೊತೆಗಿದ್ದರು.
ಭಜನಾ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಯುಎಸ್ ಎಎಂ ಎಸ್ ಅಕಾಡೆಮಿಕ್ಸ್ ಆ್ಯಂಡ್ ಟ್ರೈನಿಂಗ್ ನ ನಿರ್ದೇಶಕ ಡಾ.ಸಿ.ಕೆ.ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಪ್ರಾಂಶುಪಾಲ ರಮೇಶ ಹಂದೆ,ಎನ್ ಎಸ್ ಯು ಎಂ ಪ.ಪೂ.ಕಾಲೇಜಿನ ಪ್ರಾಚಾರ್ಯ ಪ್ರಕಾಶ ಶೆಣೈ ಅವರು ಡಾ.ಸುರೇಶ ರಾವ್ ಅವರ ಸಾಧನೆಗಳನ್ನು ವಿವರಿಸಿ ವಿದ್ಯಾರ್ಥಿ ಜೀವನದ ದಿನಗಳನ್ನು ನೆನಪಿಸಿಕೊಂಡು ಅಭಿನಂದಿಸಿದರು.ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಆಶೀರ್ವದಿಸಿದರು. ನಿವೃತ್ತ ಪಾಂಶುಪಾಲ ಬಿ.ಆರ್. ನಾಗರತ್ನ,ಕೆಮುಂಡೇಲು ಶಾಲೆಯ
ಮುಖೋಪಾಧ್ಯಾಯ ಜಗನ್ನಾಥ ಶೆಟ್ಟಿ,ಭಜನಾ ಮಂಡಳಿಯ ಅರ್ಚಕ ಶ್ರೀಪತಿ ಆಚಾರ್ಯ,
ಬಾಲಕೃಷ್ಣ ರಾವ್, ಕೆ.ಎಲ್.ಕುಂಡಂತಾಯ ಉಪಸ್ಥಿತರಿದ್ದರು.
ಭಜನಾ ಮಂಡಳಿಯ ಕಾರ್ಯದರ್ಶಿ ಕೃಷ್ಣಾನಂದ ರಾವ್ ಸ್ವಾಗತಿಸಿದರು. ಹರೀಶ ಕೋಟ್ಯಾನ್ ಡಾ.ಸುರೇಶ ರಾವ್ ಅವರಿಗೆ ನೀಡಲಾದ “ಅಭಿನಂದನೆಯ ಆಲೇಖ”ವನ್ನು ವಾಚಿಸಿದರು,ಪ್ರಾಧ್ಯಾಪಕ ದೇವಿಪ್ರಸಾದ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಹರೀಶ್ ವಂದಿಸಿದರು.
