LATEST NEWS

ಯು.ಕೆ.ಯಲ್ಲಿ ಉದ್ಯೋಗ – ವೀಸಾ ಕೊಡಿಸುವುದಾಗಿ ನಂಬಿಸಿ ವಂಚನೆ

Share

ಮಂಗಳೂರು: ಯು.ಕೆ.ಯಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ನಂಬಿಸಿ 16 ಲಕ್ಷ ರೂ. ಪಡೆದು ವಂಚನೆ ಮಾಡಿರುವ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಡಿಯಾಲಬೈಲಿನಲ್ಲಿನ ಯು.ಕೆ. ರೀಗಲ್ ಅಕಾಡೆಮಿ ಎನ್ನುವ ಸಂಸ್ಥೆ ವಿದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ಫೇಸ್ಬುಕ್‌ನಲ್ಲಿ ಜಾಹೀರಾತು ಪ್ರಕಟಿಸಿತ್ತು. ಇದನ್ನು ನೋಡಿದ ದೂರುದಾರರು ಮಗನಿಗೆ ಯು.ಕೆ.ಯಲ್ಲಿ ಉದ್ಯೋಗಕ್ಕಾಗಿ ವೀಸಾ ಪಡೆಯಲು ಸಂಪರ್ಕಿಸಿದ್ದಾರೆ.
ಈ ವೇಳೆ 16 ಲಕ್ಷ ನೀಡಿದರೆ 90 ದಿನದಲ್ಲಿ ವೀಸಾ ಮಾಡಿಕೊಡುವ ಭರವಸೆ ಕೊಟ್ಟಿದ್ದಾರೆ. ಅದರಂತೆ ಕೊಡಿಯಾಲಬೈಲಿನ ಸಂಸ್ಥೆಯ ಕಚೇರಿಗೆ ಹೋದಾಗ ಸೂರಜ್ ಜೋಸೆಫ್ 2 ಲಕ್ಷ ರೂ. ನಗದು ಮುಂಗಡವಾಗಿ ಪಡೆದು ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಅನಂತರ 16 ಲಕ್ಷ ರೂ. ನೀಡುವಂತೆ ಪದೇ ಪದೆ ಒತ್ತಾಯಿಸಿದ್ದು, ಕೊಡದಿದ್ದರೆ ವೀಸಾ ರದ್ದಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾನೆ. 2023ರ ಅ. 27ರಂದು 3 ಲಕ್ಷ ರೂ. ಮತ್ತು ಡಿ.1ರಂದು 13 ಲಕ್ಷ ರೂ. ಸಂಸ್ಥೆಯ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ. ಆದರೆ ಆ ಬಳಿಕ ಸೂರಜ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ.
ದೂರುದಾರರು 2024ರ ಮಾ.20ರಂದು ಸಂಸ್ಥೆಯ ಕಚೇರಿಗೆ ಹೋದಾಗ ಅಲ್ಲಿದ್ದ ಆತ 3 ತಿಂಗಳೊಳಗೆ ವೀಸಾ ಕಳುಹಿಸುತ್ತೇನೆ ಇಲ್ಲವಾದಲ್ಲಿ ಆರು ತಿಂಗಳೊಳಗೆ ಹಣವನ್ನು ವಾಪಸ್ ನೀಡುವುದಾಗಿ ಬರೆದು ಕೊಟ್ಟಿದ್ದ. ಆದರೆ ಆರು ತಿಂಗಳು ಕಳೆದರೂ ವೀಸಾವನ್ನೂ ನೀಡದೆ, ಹಣವನ್ನು ವಾಪಸ್ ಕೊಡದೆ ತಪ್ಪಿಸಿಕೊಂಡಿದ್ದಾನೆ. 2024ರ ಅ. 3ರಂದು ಮತ್ತೆ ಕಚೇರಿಗೆ ಹೋದಾಗ 16 ಲಕ್ಷ ರೂ. ಚೆಕ್ ನೀಡಿದ್ದಾನೆ. ದೂರುದಾರರು ಡಿ.16ರಂದು ಚೆಕ್ ಅನ್ನು ಬ್ಯಾಂಕಿಗೆ ಹಾಕಿದಾಗ ಖಾತೆಯಲ್ಲಿ ಹಣವಿಲ್ಲದೆ ಬೌನ್ಸ್ ಆಗಿದೆ. ಕೊನೆಗೆ ಈ ಬಗ್ಗೆ ಬಂದರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Click to comment

Leave a Reply

Your email address will not be published. Required fields are marked *

To Top