
ಸುಬ್ರಹ್ಮಣ್ಯ:
ಭಾರತೀಯ ಜನತಾ ಪಕ್ಷದ ತಮಿಳುನಾಡು ರಾಜ್ಯದ ಮಾಜಿ ಅಧ್ಯಕ್ಷ ಹಾಗೂ ಖ್ಯಾತ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಕುಟುಂಬ ಸಮೇತ ಪವಿತ್ರ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದರ್ಶನಕ್ಕೆ ಆಗಮಿಸಿದರು. ಅವರು ಶ್ರೀ ಸಂಪುಟ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಅವರ ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಪೂಜೆ ಮುಗಿಸಿದ ನಂತರ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಮಾಧ್ಯಮದೊಂದಿಗೆ ಮಾತನಾಡಿದ ಅಣ್ಣಾಮಲೈ ಅವರು:
“ನಾನು ಕಳೆದ ಹತ್ತು ಹದಿನೈದು ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹಾಗೂ ಸ್ವಾಮೀಜಿಗಳ ಭೇಟಿಯಾಗಿ ಅಶಿರ್ವಾದ ಪಡೆಯುತ್ತಿದ್ದೇನೆ ಆಶ್ಲೇಷ ನಕ್ಷತ್ರದ ಈ ಪುಣ್ಯದಿನದಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದು ತಮಿಳುನಾಡಿನ ಜನ, ಕರ್ನಾಟಕದ ಜನ ಹಾಗೂ ಇಡೀ ಭಾರತದ ಜನರು ಸುಖ ಶಾಂತಿ ನೆಮ್ಮದಿಯಾಗಿ ಇರಬೇಕು ಹಾಗೂ ಎಲ್ಲಾ ಜನರಿಗೂ ಒಳ್ಳೆದಾಗಬೇಕು ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದರು.”
“ಈ ಕ್ಷೇತ್ರವು ಪರಶುರಾಮ ಸೃಷ್ಟಿಯ ಕ್ಷೇತ್ರವಾಗಿದ್ದು, ಹಲವು ವರ್ಷಗಳ ಇತಿಹಾಸವಿದೆ. ಸಾವಿರಾರು ಭಕ್ತರು ನಂಬಿಕೆಯಿಂದ ಇಲ್ಲಿ ಬಂದು ದೇವರಲ್ಲಿ ಶರಣಾಗುತ್ತಾರೆ. ಈ ಬಾರಿ ಕೂಡ ನಾನು ದೇವರ ದರ್ಶನ ಮಾಡಿ ಸ್ವಾಮೀಜಿಗಳ ಆಶೀರ್ವಾದ ಪಡೆದು ಮನಸ್ಸಿಗೆ ನೆಮ್ಮದಿ ಕಂಡು ವಾಪಸ್ಸಾಗುತ್ತಿದ್ದೇನೆ.”
ಅಣ್ಣಾಮಲೈ ಅವರು ತಮ್ಮ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ಜನಸೇವೆಗೆ ರಾಜಕೀಯ ಪ್ರವೇಶ ಮಾಡಿದ ಧೈರ್ಯಶಾಲಿ, ನಿಷ್ಠಾವಂತ ವ್ಯಕ್ತಿಯಾಗಿದ್ದಾರೆ. “ಸಿಂಘಂ ಐಪಿಎಸ್” ಎಂದು ಜನಪ್ರಿಯರಾಗಿರುವ ಅವರು ಗ್ರಾಮೀಣ ಮಟ್ಟದ ಜನರೊಂದಿಗೆ ನೇರ ಸಂಪರ್ಕ ಸಾಧಿಸುತ್ತಾ ಭ್ರಷ್ಟಾಚಾರ ಹಾಗೂ ಸಾಮಾಜಿಕ ಅನ್ಯಾಯಗಳ ವಿರುದ್ಧ ಸದಾ ಧ್ವನಿ ಎತ್ತುತ್ತಾರೆ. ಜನಸಂಪರ್ಕ ಯಾತ್ರೆಯ ಮೂಲಕ ಅವರು ತಮಿಳುನಾಡಿನಲ್ಲಿ ಸಾವಿರಾರು ಜನರನ್ನು ನೇರವಾಗಿ ಸಂಪರ್ಕಿಸಿ ಬಿಜೆಪಿ ಪಕ್ಷವನ್ನು ಬಲಪಡಿಸಿದ ಪ್ರಭಾವಿ ನಾಯಕರು.