ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಹಲವು ಅಪರಾಧ ಕೃತ್ಯಗಳ ಕುರಿತ ಮಾಹಿತಿ ಹಾಗೂ ಹಲವಾರು ಮೃತದೇಹಗಳನ್ನು ದಫನ್ ಮಾಡಿರುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ವ್ಯಕ್ತಿ ನಿನ್ನೆ ವಕೀಲರ ಜೊತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ವಕೀಲರ ಜೊತೆ ಹಾಜರಾಗಿ ಹೇಳಿಕೆ ನೀಡಿದ್ದಾರೆ ಬಳಿಕ ಪೊಲೀಸರಿಗೆ ತನ್ನ ಹೇಳಿಕೆಗೆ ಸಂಬಂಧಿಸಿದಂತೆ ಅಸ್ಥಿಪಂಜರದ ಅವಶೇಷಗಳನ್ನು ಹಸ್ತಾಂತರಿಸಿದ್ದಾರೆ.
ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಮಹಿಳೆಯರು ಮತ್ತು ಮಕ್ಕಳ ಮೃತದೇಹಗಳನ್ನು ಹೂತಿರುವುದಾಗಿ ಹೇಳಿಕೆ ನೀಡಿದ್ದ ವ್ಯಕ್ತಿಯು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಪ್ರಧಾನ ಸಿವಿಲ್ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆ ದಾಖಲಿಸಿದ್ದಾರೆ.
ಕಪ್ಪು ಬಟ್ಟೆಯಿಂದ ಪೂರ್ತಿ ಮುಖ ಮುಚ್ಚಿಕೊಂಡಿದ್ದ ವ್ಯಕ್ತಿಯು ಬೆಳ್ತಂಗಡಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆ ಸಂದೇಶ್ ಅವರ ಕೊಠಡಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 183ರ ಅಡಿ ಹೇಳಿಕೆ ದಾಖಲಿಸಿದರು.
ಹೇಳಿಕೆ ದಾಖಲಿಸುವಾಗ ನ್ಯಾಯಾಧೀಶರ ಕೊಠಡಿಯಲ್ಲಿ ದೂರುದಾರನ ಜೊತೆಗೆ ಇರಲು ನಿರ್ದಿಷ್ಟ ಮನವಿಯ ಹೊರತಾಗಿಯೂ ಆತನ ವಕೀಲರಿಗೆ ಅವಕಾಶ ನಿರಾಕರಿಸಲಾಗಿತ್ತು ಎನ್ನಲಾಗಿದೆ.
ಬಳಿಕ ದೂರುದಾರನ್ನು ಬೆಳ್ತಂಗಡಿ ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದಿದ್ದರು. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಕಚೇರಿ ಪ್ರಕಟಣೆ ಬಿಡುಗಡೆ ಮಾಡಿದೆ.
”ಶುಕ್ರವಾರ ಸಾಕ್ಷಿ ದೂರುದಾರರು ಬೆಳ್ತಂಗಡಿಯ ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಹೇಳಿಕೆ ನೀಡಿದ್ದಾರೆ. ಸಾಕ್ಷಿ ದೂರುದಾರರು ಸ್ವತಃ ತಾವೇ ಹೊರತೆಗೆದಿರುವುದಾಗಿ ತಿಳಿಸಿರುವ ಅಸ್ಥಿಪಂಜರದ ಅವಶೇಷಗಳನ್ನು ಹಾಜರುಪಡಿಸಿದ್ದು, ಅವುಗಳನ್ನು ಸಾಕ್ಷಿ ದೂರುದಾರರ ಪರ ವಕೀಲರು ಹಾಗೂ ಪಂಚರ ಸಮ್ಮುಖದಲ್ಲಿ ಪೊಲೀಸರು ಸ್ವಾಧೀನಕ್ಕೆ ಪಡೆದುಕೊಳ್ಳಲಾಗಿದೆ.
ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆದರೆ ಸಾಕ್ಷಿ ದೂರುದಾರರ ಗುರುತಿನ ರಕ್ಷಣೆಯ ವಿಚಾರದಲ್ಲಿ, ಸಾಕ್ಷಿ ದೂರುದಾರರನ್ನು ಪ್ರತಿನಿಧಿಸಿರುವ ವ್ಯಕ್ತಿಗಳು ಪತ್ರಿಕಾ ಪ್ರಕಟಣೆ ಹಾಗೂ ಎಫ್.ಐ.ಆರ್ ಪ್ರತಿಯನ್ನು ಮಾಧ್ಯಮಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೀಡುವ ಮೂಲಕ, ಸಾಕ್ಷಿ ದೂರುದಾರರ ವಯಸ್ಸು, ವೃತ್ತಿಯ ಸ್ಥಳ, ಚಹರೆ, ವೃತ್ತಿಯಲ್ಲಿದ್ದ ಅವಧಿ, ಸಮುದಾಯ ಮತ್ತು ಇತರೆ ಮಾಹಿತಿಗಳನ್ನು ಬಹಿರಂಗಗೊಳಿಸಿರುವುದರಿಂದ, ಸ್ಥಳೀಯ ಅನೇಕರು ಸಾಕ್ಷಿ ದೂರುದಾರರನ್ನು ಅಂದಾಜಿಸಿರುತ್ತಾರೆ.
ಆದಾಗ್ಯೂ ಎಲ್ಲಾ ಅಧಿಕೃತ ಮೂಲಗಳಿಂದ ಸಾಕ್ಷಿ ದೂರುದಾರರ ಗುರುತನ್ನು ಬಹಿರಂಗಪಡಿಸದಿರಲು ನಿರ್ಧರಿಸಲಾಗಿರುತ್ತದೆ ಹಾಗೂ ಈ ಬಗ್ಗೆ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರ ನೇತೃತ್ವದಲ್ಲಿ ಪ್ರತ್ಯೇಕ ತನಿಖೆ ಆರಂಭಿಸಲಾಗಿದೆ.