ಮಂಗಳೂರು : ವಿಷಾನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿ, ಮತ್ತೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸುರತ್ಕಲ್ನ ಎಂಆರ್ಪಿಎಲ್ ಘಟಕದಲ್ಲಿ ನಡೆದ ವಿಷಾನಿಲ ದುರಂತದಲ್ಲಿ ಉತ್ತರ ಪ್ರದೇಶದ ಪ್ರಾಯಗ್ರಾಜ್ ಜಿಲ್ಲೆಯ ದೀಪಚಂದ್ರ (33) ಮತ್ತು ಕೇರಳ ಮೂಲದ ಬಿಜಿಲ್ ಪ್ರಸಾದ್ (33) ಮೃತಪಟ್ಟಿದ್ದಾರೆ
ಗದಗ ಮೂಲದ ವಿನಾಯಕ್ ಎಂಬ ಮತ್ತೊಬ್ಬ ಕಾರ್ಮಿಕ ಗಂಭೀರವಾಗಿ ಅಸ್ವಸ್ಥಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಂಆರ್ಪಿಎಲ್ನ H2S (ಹೈಡ್ರೋಜನ್ ಸಲ್ಫೈಡ್) ಗ್ಯಾಸ್ ಉತ್ಪಾದನಾ ಘಟಕದ ಆಯಿಲ್ ಮೂವ್ಮೆಂಟ್ ಮತ್ತು ಸ್ಟೋರೇಜ್ (OM&S) ಯುನಿಟ್ನ ಶೇಖರಣಾ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ.
ಮೂವರು ಓಎಂ&ಎಸ್ ಸ್ಟೋರೇಜ್ ಘಟಕದಲ್ಲಿ ನಿರ್ವಹಣಾ ತಂಡದಲ್ಲಿದ್ದರು. ಟ್ಯಾಂಕ್ FB7029 A (ಡ್ರೈ ಸ್ಲಾಪ್ ಸರ್ವಿಸ್ – ಫ್ಲೋಟಿಂಗ್ ರೂಫ್)ನಲ್ಲಿ ಹೈಡ್ರೋಜನ್ ಸಲ್ಫೈಡ್ (H2S) ಅನಿಲ ಸೋರಿಕೆಯಾಗಿದೆ.
ಟ್ಯಾಂಕ್ ಶುಚಿಗೊಳಿಸುವ ವೇಳೆ ದುರಂತ
ಟ್ಯಾಂಕ್ಗಳನ್ನು ಶುಚಿಗೊಳಿಸುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಎಂಆರ್ಪಿಎಲ್ ಘಟಕದ ಸುರಕ್ಷತಾ ವಿಭಾಗದ ಅಧಿಕಾರಿಗಳು ಸೋರಿಕೆಯನ್ನು ತಡೆದು ಇನ್ನು ಹೆಚ್ಚಿನ ಅನಾಹುತ ಸಂಭವಿಸಿದಂತೆ ತಡೆದಿದ್ದಾರೆ.
ಅಸಹಜ ಸಾವಿನ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉನ್ನತ ಮಟ್ಟದ ತನಿಖೆ:
ವಿಷಾನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಅಲ್ಲದೇ ಮೃತಪಟ್ಟ ಸಂತ್ರಸ್ತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ಎಲ್ಲಾ ಸುರಕ್ಷತಾ ನಿಯಮಗಳನ್ನು ಬಲಪಡಿಸಲು ಸೂಚಿಸಲಾಗಿದೆ.
