ಹಂಗಾರಕಟ್ಟೆ:
ಋಷಿ ಸಂಸ್ಕೃತಿಯ ಬಾಳೆಕುದ್ರು ಮಠದ ಸ್ವಾಮೀಜಿ ಕೃಷಿಗೆ ಪ್ರೋತ್ಸಾಹವನ್ನು ಉತ್ತೇಜನವನ್ನ ನೀಡಿದ್ದು ಮಾತ್ರವಲ್ಲದೆ ತಮ್ಮ ಮಠದಲ್ಲಿ ಇದ್ದ 5 ಎಕರೆ ಜಾಗದಲ್ಲಿ ಬೇಸಾಯವನ್ನು ಮಾಡಿಸುತ್ತಾ ಋಷಿ ಸಂಸ್ಕೃತಿಗೂ ಕೃಷಿ ಸಂಸ್ಕೃತಿಗೂ ರಾಯಭಾರಿಯಂತೆ ಕರ್ತವ್ಯ ನಿರ್ವಹಿಸಿದ್ದರು.
ನದಿಗಳ ಸಂಗಮದ ಪ್ರಕೃತಿಯ ರಮ್ಯ ಮನೋಹರ ತಾಣ ಹಂಗಾರಕಟ್ಟೆಯ ಹೆದ್ದಾರಿಯ ಬಳಿಯ ಬಾಳೆಕುದ್ರು ಮಠದಲ್ಲಿ ಸ್ವಾಮೀಜಿಗಳಾಗಿ ತಮ್ಮ ಕೈಂಕರ್ಯವನ್ನು ನಿರ್ವಹಿಸುತ್ತಿದ್ದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ (55) ಶುಕ್ರವಾರ ದೈವಾಧೀನರಾಗಿದ್ದಾರೆ.
ಶುಕ್ರವಾರ ಬೆಳಗ್ಗೆ ಡಯಾಲಿಸಿಸ್ ಗೆಂದು ಕರೆದುಕೊಂಡು ಹೋಗುವಾಗ ಬ್ರಹ್ಮಾವರದ ಬಳಿ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು.
ಅವರನ್ನು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದಾರಿಮಧ್ಯದಲ್ಲೇ ದೈವಾಧೀನರಾದರು.
ಇದೀಗ ಶ್ರೀಗಳನ್ನು ಬಾಳೆಕುದ್ರು ಮಠಕ್ಕೆ ತರಲಾಗಿದ್ದು, ಭಕ್ತರಿಗೆ ಅಂತಿಮ ದರ್ಶನಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ಸಂಜೆ ನಾಲ್ಕು ಗಂಟೆ ಬಳಿಕ ಕಿರಿಯ ಶ್ರೀಗಳಾದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿಗಳ ಮೂಲಕ ವಿಧಿವಿಧಾನಗಳು ನೆರವೇರಲಿದೆ ಎಂದು ಮಠದ ಮೂಲಗಳು ತಿಳಿಸಿದೆ.
- ಶ್ರೀಮಠದ ಪೂರ್ವ ಸ್ವಾಮೀಜಿಗಳಾದ ಶಂಕರಾಶ್ರಮ ಸ್ವಾಮಿಜಿಗಳು ಬ್ರಹ್ಮಕ್ಯರಾದ ನಂತರ ಶ್ರೀ ನೃಸಿಂಹಾಶ್ರಮ ಶ್ರೀಗಳು, 2006ರಲ್ಲಿ ಬಾಳೆಕುದ್ರು ಮಠದ ಪೀಠಾಧಿಪತಿಗಳಾದರು. ಶೃಂಗೇರಿ ಹಿರಿಯ ಶ್ರೀಗಳ ನೇತೃತ್ವದಲ್ಲಿ ಹೆಬ್ಬರು ಮಠದ ನಾರಾಯಣಾಶ್ರಮ ಸ್ವಾಮಿಗಳಿಂದ ಸನ್ಯಾಸ ದೀಕ್ಷೆ ಪಡೆದರು. ಹಲವು ವರ್ಷಗಳಿಂದ ಶ್ರೀಗಳು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಶ್ರೀಗಳಿಗೆ ವಾರಕ್ಕೆರಡು ಬಾರಿ ಡಯಾಲಿಸಿಸ್, ನಡೆಯುತ್ತಿತ್ತು.
ಮಠದ ಉತ್ತರಾಧಿಕಾರಿಯಾಗಿ ಕಳೆದ ವರ್ಷ ಶಿಷ್ಯ ಪಟ್ಟವನ್ನು ಬಾಳೆಕುದ್ರು ವಾಸುದೇವ ಸ್ವಾಮೀಜಿಯವರಿಗೆ ನೀಡಿದ್ದರು.
