- ಬಂಟ್ವಾಳ: ಕೇರಳದಿಂದ ಅಧಿಕೃತ ಪರವಾನಿಗೆಯೊಂದಿಗೆ ಲ್ಯಾಟರೇಟ್ ಕಲ್ಲುಗಳನ್ನು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ತಡೆದು ನಿಲ್ಲಿಸಿ, ಚಾಲಕರಿಗೆ ಬೆದರಿಕೆಯೊಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 8 ಮಂದಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ಸೋಮವಾರ ರಾತ್ರಿ ಈ ಪ್ರಕರಣ ನಡೆದಿದೆ.
ಕರ್ನಾಟಕದ ಅಂದರೆ ದಕ್ಷಿಣ ಕನ್ನಡ ಜಿಲ್ಲೆಯ ಕೆಂಪು ಕಲ್ಲು ಗುತ್ತಿಗೆದಾರರಿಗೆ ಅತಿ ಹೆಚ್ಚು ರಾಯಲ್ಟಿ ವಿಧಿಸುತ್ತಿರುವುದರಿಂದ ಕೆಂಪುಕಲ್ಲು ಉದ್ಯಮ ನಷ್ಟದಲ್ಲಿದೆ. ಅನಧಿಕೃತವಾಗಿ ಸಾಗಿಸಿದರೆ ಮಾತ್ರ ಲಾಭ ಮಾಡಬಹುದು.
ಆದರೆ ಈಗ ದಕ್ಷಿಣ ಕನ್ನಡ ಜಿಲ್ಲೆಗೆ ಎಸ್ಪಿ ಆಗಿ ಅರುಣ್ ಕುಮಾರ್ ಅಧಿಕಾರ ಸ್ವೀಕರಿಸಿದ ಬಳಿಕ ಅಕ್ರಮ ಸಾಗಾಟವನ್ನು ಬಹುತೇಕ ನಿಷೇಧಿಸಿದ್ದಾರೆ.
ಕೆಂಪುಕಲ್ಲು ಗುತ್ತಿಗೆದಾರರು ತಮ್ಮ ಉದ್ಯಮವನ್ನೇ ಬಂದ್ ಮಾಡುವಂತಹ ಸಂದಿಗ್ದ ಸ್ಥಿತಿಗೆ ತಲುಪಿದ್ದಾರೆ.
ಇದೇ ವೇಳೆಗೆ ಕೇರಳದಲ್ಲಿ ಅತಿ ಕಡಿಮೆ ರಾಯಲ್ಟಿ ವಿಧಿಸುತಿರುವುದರಿಂದ ಅಲ್ಲಿನ ಕೆಂಪುಕಲ್ಲು ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸರಬರಾಜು ಆಗುತ್ತಿವೆ.
ಪರಿಣಾಮ ಇಲ್ಲಿನ ಗುತ್ತಿಗೆದಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೇರಳದವರು ಈ ಭಾಗದಲ್ಲಿ ಕೆಂಪು ಕಲ್ಲು ಸಾಗಾಟದ ಮೇಲೆ ಅಧಿಪತ್ಯ ಸಾಧಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯ ಕೆಂಪುಕಲ್ಲು ಗುತ್ತಿಗೆದಾರರ ಉದ್ಯಮಕ್ಕೆ ಮರಣ ಶಾಸನವಾಗಲಿದೆ.
ಇದೇ ವೇಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲಿನ ಅಭಾವದಿಂದ ಅನೇಕ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ.
ಮನೆಗಳು, ಫ್ಯಾಕ್ಟರಿಗಳು, ಕಟ್ಟಡಗಳು ಹೀಗೆ ಜನರು ಅನಿವಾರ್ಯವಾಗಿ ಕೇರಳದಿಂದ ಕೆಂಪುಕಲ್ಲು ಆಮದು ಮಾಡಿಸಿಕೊಳ್ಳಬೇಕಾದಂತಹ ಪರಿಸ್ಥಿತಿಗೆ ಸಿಲುಕಿದ್ದಾರೆ.
ಕೆಂಪು ಕಲ್ಲಿನ ಬೇಡಿಕೆಯನ್ನು ಮನಗಂಡ ಕೇರಳದ ಗುತ್ತಿಗೆದಾರರು ತಾ ಮುಂದು ಎಂಬಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಕೆಂಪು ಕಲ್ಲು ಗಳನ್ನು ಸಾಗಿಸುತ್ತಿದ್ದಾರೆ.
ಈ ಸಾಗಾಟಕ್ಕೆ ಈ ಭಾಗದ ಗುತ್ತಿಗೆದಾರರ ವಿರೋಧವಿದೆ.
ಪರಿಣಾಮ ಕೇರಳದ ಕೆಂಪು ಕಲ್ಲು ಸಾಗಾಟದ ಲಾರಿಗಳನ್ನು ತಡೆದು ನಿಲ್ಲಿಸುವ ಪ್ರಯತ್ನವಾಗಿದೆ.
ಕೇರಳದ ಕೆಂಪುಕಲ್ಲು ಸಾಗಾಟದ ಗುತ್ತಿಗೆದಾರರು ಪೊಲೀಸರ ಮೂಲಕ ಈ ಕೃತ್ಯಕ್ಕೆ ಫುಲ್ ಸ್ಟಾಪ್ ಹಾಕಲು ನಿರ್ಧರಿಸಿದ್ದಾರೆ.
ಕೇರಳದ ರಾಯಲ್ಟಿಗು ಕರ್ನಾಟಕದ ರಾಯಲ್ಟಿಗು ಸರಿಸುಮಾರು 250 ರೂಪಾಯಿಯ ಅಂತರವಿದೆ.
ಇದರಿಂದಾಗಿ ಕರ್ನಾಟಕದ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಗುತ್ತಿಗೆದಾರರು ತೀವ್ರ ಸಂಕಷ್ಟದಲ್ಲಿದ್ದಾರೆ.
ಅವರು ಸರ್ಕಾರಕ್ಕೆ ತಮ್ಮ ಉದ್ಯಮವನ್ನು ಉಳಿಸುವ ಗ್ಯಾರಂಟಿಗಾಗಿ ಅಂಗಲಾಚುತಿದ್ದಾರೆ.
ಘಟನೆಯ ವಿವರ:
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿಗಳಾದ ಸುಹೇಬ್ (38) ಮತ್ತು ಉಮೇಶ್ ಯಾನೆ ಹರ್ಷ ಎಂಬ ಚಾಲಕರು ಈ ಸಂಬಂಧ ದೂರು ನೀಡಿದ್ದಾರೆ. ಇವರು ಸೋಮವಾರ ಕೇರಳದ ನೆಕ್ರಾಜೆಯಲ್ಲಿರುವ ಕೋರೆಯಿಂದ ತಮ್ಮ ಲಾರಿಗಳಲ್ಲಿ (ಕೆಎ-32-ಬಿ-2256 ಮತ್ತು ಕೆಎ-21-ಬಿ-2471) ಲ್ಯಾಟರೇಟ್ ಕಲ್ಲುಗಳನ್ನು ತುಂಬಿಕೊಂಡು, ಸಾಗಾಟಕ್ಕೆ ಅಗತ್ಯವಿರುವ ಪರವಾನಿಗೆಯೊಂದಿಗೆ ಪುತ್ತೂರಿನತ್ತ ಪ್ರಯಾಣಿಸುತ್ತಿದ್ದರು.
ಕರ್ನಾಟಕದಲ್ಲಿ 1 ಟನ್ ಮುರ ಇಟ್ಟಿಗೆಗೆ ವಿಧಿಸಿರುವ ತೆರಿಗೆಯ ಮೊತ್ತ 282 ರೂ. ಆಗಿದ್ದು, ಈ ತೆರಿಗೆಯ ಮೊತ್ತವನ್ನು ಪ್ರತಿ 1 ಟನ್ ಮುರ ಇಟ್ಟಿಗೆಗೆ ಕೇರಳ ರಾಜ್ಯ ತೆರಿಗೆಯ ಮಾದರಿಯಂತೆ 32 ರೂ. ನಿಗದಿ ಪಡಿಸಬೇಕು
ಸತೀಶ್ ಆಚಾರ್ಯ
ಕೆಂಪುಕಲ್ಲು ಗುತ್ತಿಗೆದಾರರ ಸಂಘ
